Kannada Sahitya Parishat ಸಹಜ ಸಾತ್ವಿಕ ಬದುಕೇ ಶರಣ ಸಂಸ್ಕೃತಿಯಾಗಿದ್ದು ಇದರ ವಾಚಿಕ ಅಭಿವ್ಯಕ್ತಿಯೇ ವಚನ ಸಾಹಿತ್ಯವಾಗಿದೆ. ವಚನ ಸಾಹಿತ್ಯವನ್ನು ಕೇವಲ ಅಧ್ಯಯನ ಮಾಡುವುದಕ್ಕಿಂತ ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳುವುದು ಅವಶ್ಯಕ ಎಂದು ಹಿರಿಯ ಪತ್ರಕರ್ತ, ಚಿಂತಕ ಎಚ್. ಬಿ ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಾಗನೂರು ಬಸಪ್ಪ ಸಂಯುಕ್ತ ಶಾಲೆ ಬಸವ ಮಂಟಪ, ಹಿರಿಯ ನಾಗರೀಕರ ಸಹಾಯವಾಣಿ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಾಡಾಗಿದ್ದ ಶಾಲಾ ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ ಮಾಲಿಕೆ ಅಂಗವಾಗಿ “ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.
ಅರ್ಥ ಕಾಮಗಳಿಗೆ ಆದ್ಯತೆ ಇಲ್ಲದ ಸಾಮಾಜಿಕ ಪ್ರಜ್ಞೆಯ ಸಮಾನತಾ ಮನೋಭಾವದ ವಚನ ಸಾಹಿತ್ಯವು ಸಾಧನ ಮೌಲ್ಯಗಳಿಗಿಂತ ಸಾಧ್ಯ ಮೌಲ್ಯಕ್ಕೆ ಪ್ರಾಶಸ್ತ್ಯವನ್ನು ಕೊಟ್ಟಿದ್ದು ಸಾರ್ವಕಾಲಿಕ ಸತ್ಯದ ವಚನಕಾರರು ನಮ್ಮ ಪರಂಪರೆಯಿಂದ ಬಂದ ವೇದ, ಆಗಮ, ಪುರಾಣ, ಇತಿಹಾಸ, ಮಹಾಕಾವ್ಯಗಳ ವಿರೋಧಿಗಳಾಗಿರದೆ ಅವುಗಳ ಅಧ್ಯಯನವನ್ನು ಮಾಡಿದವರಾಗಿದ್ದರು. ಆದರೆ ವೇದ ಪುರಾಣ ಆಗಮಾದಿಗಳನ್ನು ಮುಂದಿಟ್ಟುಕೊಂಡು ಸಮಾಜದ ದಿಕ್ಕು ತಪ್ಪಿಸುವವರ ವಿರೋಧಿಗಳಾಗಿದ್ದರು. ನಮ್ಮ ಸನಾತನ ಸಾಹಿತ್ಯದ ಎಲ್ಲ ಮೌಲ್ಯಯುತ ಅಂಶಗಳನ್ನು ಸರಳ ಕನ್ನಡ ಭಾಷೆಯಲ್ಲಿ ಶ್ರೀಸಾಮಾನ್ಯರಿಗೂ ಅರ್ಥವಾಗುವಂತೆ ಕೊಟ್ಟವರು ನಮ್ಮ ವಚನಕಾರರು ಹಾಗೂ ಕೀರ್ತನಕಾರರು, ಹೀಗಾಗಿಯೇ ಕನ್ನಡ ಸಾಹಿತ್ಯ ಲೋಕದ ಅಷ್ಟೇ ಅಲ್ಲ ಆಧ್ಯಾತ್ಮಿಕ ಚಿಂತನೆಯ ಎರಡು ಕಣ್ಣುಗಳಂತೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳು ಸಾರ್ವಕಾಲಿಕ ಮೌಲ್ಯಗಳನ್ನು ಪಡೆದಿವೆ ಎಂದು ಎಚ್ ಬಿ ಮಂಜುನಾಥ್ ಉದಾಹರಣೆಗಳ ಸಹಿತ ಪ್ರತಿಪಾದಿಸಿದರು.
Kannada Sahitya Parishat ಅನ್ಯಭಿನ್ನವಿಲ್ಲದ ಜ್ಞಾನಮಾರ್ಗವೇ ವಚನ ಸಾಹಿತ್ಯವಾಗಿದ್ದು “ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ” ಎಂಬ ನುಡಿಗಟ್ಟು ಇವರ ಧ್ಯೇಯವಾಗಿತ್ತು, ಬಹಿರಂಗ ಶುದ್ದಿಯು ನಾಗರಿಕತೆಯಾಗಿ ಕಂಡರೆ ಅಂತರಂಗ ಶುದ್ದಿಯು ಸಂಸ್ಕೃತಿಯಾಗುತ್ತದೆ, ಅಂತರಂಗ ಬಹಿರಂಗ ಶುದ್ದಿಗಳೆರಡಕ್ಕೂ ಮಾರ್ಗ ತೋರಿಸಿರುವುದು ವಚನ ಸಾಹಿತ್ಯವಾಗಿದೆ ಎಂದೂ ಮಂಜುನಾಥ್ ಹೇಳಿದರು. ರಸಾಸ್ವಾದನೆಯು ಕಾವ್ಯಗಳ ಆಶಯವಾದರೆ ಮೌಲ್ಯ ಪ್ರತಿಪಾದನೆಯ ವಚನಗಳ ಆಶಯವಾಗಿದೆ, ವಚನ ಸಾಹಿತ್ಯಕ್ಕಾಗಲಿ ದಾಸ ಸಾಹಿತ್ಯಕ್ಕಾಗಲಿ ಪ್ರಚಾರದ ಅವಶ್ಯಕತೆಯಿಲ್ಲ, ಜೀವನದಲ್ಲಿ ಅದರ ಪ್ರಯೋಗ ಅವಶ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಗನೂರು ಬಸಪ್ಪ ಶಾಲಾ ಆಡಳಿತಾಧಿಕಾರಿ ಎಸ್ ಆರ್ ಶಿರಗುಂಬಿ ಅವರು ಕೀರ್ತಿಶೇಷ ಮಾಗನೂರು ಬಸಪ್ಪನವರ ಜೀವನ ಮೌಲ್ಯಗಳ ಬಗ್ಗೆ ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡುತ್ತ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ಪ ಅವರು ಬಡತನದಲ್ಲಿ ಹುಟ್ಟು ತಪ್ಪಲ್ಲ , ಬಡತನದಲ್ಲೇ ಸಾಯ ಬೇಕೆಂದೇನೂ ಇಲ್ಲ, ಈ ದತ್ತಿ ದಾನಿಗಳು ಬಡತನದಿಂದ ಶ್ರೀಮಂತಿಕೆಗೆ ಬಂದವರು ಸತ್ಕಾರ್ಯಕ್ಕೆ ಕೊಡುವ ಉದಾರತೆಯನ್ನೂ ಹೊಂದಿದ್ದರು ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟಿನ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡರು ಶ್ರೇಷ್ಠ ಕನಿಷ್ಠವೆಂಬ ಭೇದವಿಲ್ಲದೆ ಜ್ಞಾನ ಎಲ್ಲಿಂದ ಬಂದರೂ ಸ್ವೀಕರಿಸಿ ಅನುಷ್ಠಾನಗೊಳಿಸಿಕೊಳ್ಳಬೇಕು ಎಂದರು.
ಶಿಕ್ಷಕಿ ಲೀಲಾವತಿಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ವೇದವತಿ ಸ್ವಾಗತ ಕೋರಿದರು. ಭಾಗ್ಯಶ್ರೀ ವಂದನೆಗಳನ್ನು ಸಲ್ಲಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಹೆಚ್.ಕೆ. ಪಾಲಾಕ್ಷಪ್ಪ, ನಿರ್ದೇಶಕ ಷಡಕ್ಷರಪ್ಪ ಬೇತೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ ಬಿ ಪರಮೇಶ್ವರಪ್ಪ, ಪ್ರಾಚಾರ್ಯರಾದ ಎ.ಎಸ್. ಕುಸುಮ, ಶರಣ ಸಾಹಿತ್ಯ ಪರಿಷತ್ತಿನ ಸಿರಿಗೆರೆ ಪರಮೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು. ಮಾಗನೂರು ರಾಜಶೇಖರ ಗೌಡ್ರು ಸುಲೋಚನಮ್ಮ ಮತ್ತು ಮಕ್ಕಳು, ಸರ್ವ ಮಂಗಳಮ್ಮ ಮಾಗನೂರು ಬಸಪ್ಪ, ಮಾಗನೂರು ಸಂಗಮೇಶ್ವರ ಗೌಡ್ರು, ಲೋಕಸಭಾ ಸದಸ್ಯರಾಗಿದ್ದ ಕೀರ್ತಿಶೇಷ ಜಿ ಮಲ್ಲಿಕಾರ್ಜುನಪ್ಪ, ಭೀಮಸಮುದ್ರ ದಿವಂಗತ ಲಿಂಗಮ್ಮ ಶರಣಪಟೇಲ್ ಈಶ್ವರಪ್ಪ ಇವರುಗಳ ದತ್ತಿಯಿಂದ ನೆರವೇರಿದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್ ಬಿ ಮಂಜುನಾಥರನ್ನು ಸನ್ಮಾನಿಸಿ ಗೌರವಿಸಲಾಯಿತು
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.