Klive Special Article ಖಾಲಿಸ್ತಾನ……
ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ಇಂದ ಅಮೃತ್ ಪಾಲ್ ಸಿಂಗ್ ವರೆಗೆ…..
ಕೆನಡಾ, ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ ದೇಶಗಳ ಭಾರತದ ರಾಯಭಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮತ್ತು ಹಿಂಸೆ….
ಅಂದಿನ ದೇಶದ ಕಾರ್ಯನಿರತ ಪ್ರಧಾನಿ ಇಂದಿರಾ ಗಾಂಧಿಯವರನ್ನೇ ಹತ್ಯೆಗೈದ ಸತ್ವಂತ್ ಸಿಂಗ್ ಮತ್ತು ಬೇಹತ್ ಸಿಂಗ್ ಎಂಬ ಅಂಗರಕ್ಷಕರು ಮತ್ತು ಖಾಲಿಸ್ತಾನ ಬೆಂಬಲಿಗರು ….
ಇಂದಿಗೂ ಭಾರತದ ರಕ್ತಸಿಕ್ತ ಅಧ್ಯಾಯಗಳಲ್ಲಿ ಒಂದಾದ ಅಮೃತಸರ ಸ್ವರ್ಣ ಮಂದಿರದ ಬ್ಲೂಸ್ಟಾರ್ ಸೇನಾ ಕಾರ್ಯಾಚರಣೆಯ ಸೇಡಿಗಾಗಿ…..
ಆ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಸೈನ್ಯದ ಮುಖ್ಯಸ್ಥರಾಗಿದ್ದ ಜನರಲ್ ವೈದ್ಯ ಸಹ ನಿವೃತ್ತಿಯ ನಂತರ ಇದಕ್ಕಾಗಿ ಹತ್ಯೆಯಾಗುತ್ತಾರೆ….
ಸ್ವತಃ ಸಿಖ್ ಸಂತ ಹರಚಂದ್ ಸಿಂಗ್ ಲೋಂಗೋವಾಲ್, ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಸೇರಿ ಸಾವಿರಾರು ಜನರ ಮಾರಣಹೋಮ…..
ಪಂಜಾಬ್ ಪೋಲೀಸ್ ಮುಖ್ಯಸ್ಥರಾಗಿದ್ದ ಜ್ಯೂಲಿಯೋ ರಿಬೆರೋ, ಕೆ ಪಿ ಎಸ್ ಗಿಲ್ ಮುಂತಾದವರ ಕಠಿಣ ಪರಿಶ್ರಮ, ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ದೂರದೃಷ್ಟಿಯ
” ರಾಜೀವ್ – ಲೋಂಗೋವಾಲ್ ” ಯಶಸ್ವಿ ಒಪ್ಪಂದ, ಪ್ರಜಾಪ್ರಭುತ್ವದ ಪುನರ್ ಸ್ಥಾಪನೆ, ಸುರ್ಜಿತ್ ಸಿಂಗ್ ಬರ್ನಾಲ ನೇತೃತ್ವದ ಅಕಾಲಿದಳ ಮತ್ತು ನಂತರದ ಕಾಂಗ್ರೇಸ್ ನ ನಿರಂತರ ಅಧಿಕಾರದ ಚುನಾಯಿತ ಸರ್ಕಾರಗಳು…
Klive Special Article ಕೊನೆಗೂ ಹಿಂಸೆಗೆ ಕಡಿವಾಣ,
” ಬತ್ತದ ಕಣಜವಾಗಿ ” ಪಂಜಾಬ್ ಮರು ಸ್ಥಾಪನೆ…..
ಸುಮಾರು 35/40 ವರ್ಷಗಳ ನಂತರ ಆ ಕರಾಳ ದಿನಗಳು ನೆನಪಾಗುವಂತೆ ಮತ್ತೆ ಖಾಲಿಸ್ತಾನದ ಪರ ಹೋರಾಟದ ಸುದ್ದಿಗಳು…
ದೇಶದೊಳಗಿನ ಡ್ರಗ್ಸ್ ಮಾಫಿಯಾ, ವಿದೇಶಿ ಶಕ್ತಿಗಳ ಪ್ರಚೋದನೆ, ಧಾರ್ಮಿಕ ಮೂಲಭೂತವಾದಿಗಳ ಕಾರಣದಿಂದ ಮತ್ತೆ ಚಿಗುರೊಡೆಯುವ ಲಕ್ಷಣಗಳು ಕಾಣುತ್ತಿದೆ…..
ಸಿಖ್ ಧರ್ಮ ಮತ್ತು ಸಮುದಾಯದವರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯೇ ” ಖಾಲಿಸ್ತಾನ ” ಹೋರಾಟದ ಮುಖ್ಯ ಗುರಿ. ಭಾರತದಿಂದ ಪ್ರತ್ಯೇಕವಾಗುವ ಆಶಯ. ಜಗಜಿತ್ ಸಿಂಗ್ ಚೌಹಾಣ್ ಎಂಬ ವ್ಯಕ್ತಿಯಿಂದ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಾರಂಭದ ಹೋರಾಟವಿದು.
ವಾಸ್ತವವಾಗಿ ಸಿಖ್ ಎಂಬುದು ಒಂದು ಪ್ರತ್ಯೇಕ ಧರ್ಮವಾದರು ಭಾರತ ಸರ್ಕಾರದ ಆಡಳಿತಗಾರರಿಂದ ಇಲ್ಲಿಯವರೆಗೂ ಯಾವುದೇ ಸರ್ಕಾರಗಳು ಸಿಖ್ಖರನ್ನು ಪ್ರತ್ಯೇಕವಾಗಿ ನೋಡಿಲ್ಲ, ಯಾವುದೇ ತಾರತಮ್ಯ ಅಥವಾ ಶೋಷಣೆಗೆ ಒಳಪಡಿಸಿಲ್ಲ. ಅದಕ್ಕೆ ಬದಲಾಗಿ ಸಿಖ್ ಸಮುದಾಯದ ಬಗ್ಗೆ ಅಪಾರ ಪ್ರೀತಿ ಗೌರವ ಅಭಿಮಾನ ಮತ್ತು ಹೆಮ್ಮೆ ಇದೆ. ಸ್ವಾತಂತ್ರ್ಯ ಹೋರಾಟವೇ ಇರಲಿ, ಸೈನ್ಯದ ಪರಾಕ್ರಮಗಳೇ ಇರಲಿ, ಸೈನಿಕ ಹೋರಾಟಗಳೇ ಇರಲಿ, ರೈತ ಚಳುವಳಿಗಳೇ ಇರಲಿ, ಕ್ರೀಡಾ ಕ್ಷೇತ್ರವೇ ಇರಲಿ ಸಿಖ್ ಸಮುದಾಯದ ಸಾಧನೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆಯಿಂದ ಮಾತನಾಡುತ್ತಾರೆ.
ಸಿಖ್ ಸಮುದಾಯದ ಗ್ಯಾನಿ ಜೇಲ್ ಸಿಂಗ್ ಭಾರತದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದರೆ, ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿ 10 ವರ್ಷ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಸಿಖ್ ಸಮುದಾಯದ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಯಾವುದೇ ವೈಚಾರಿಕ ಅಥವಾ ಭಾವನಾತ್ಮಕ ಹಿನ್ನೆಲೆ ಇಲ್ಲ. ಅದು ಕೇವಲ ಕೆಲವು ಸ್ವಾರ್ಥ, ಮೂಲಭೂತವಾದಿಗಳ ಮತ್ತು ರಾಜಕೀಯ ಕಿಡಿಗೇಡಿಗಳ ಬೇಡಿಕೆ ಮಾತ್ರ. ಇಂದಿರಾಗಾಂಧಿ ಹತ್ಯೆಯ ಸಂದರ್ಭದಲ್ಲಿ ಅವರನ್ನು ಹತ್ಯೆ ಮಾಡಿದವರು ಸಿಖ್ಖರು ಎಂಬ ಕಾರಣದಿಂದ ಅವರ ಮೇಲೆ ಸಾಕಷ್ಟು ಹಲ್ಲೆ – ಹತ್ಯೆಗಳು ನಡೆದವು. ಅದರಲ್ಲೂ ದೆಹಲಿಯಲ್ಲಿ ಕೆಲವು ರಾಜಕಾರಣಿಗಳು ದೊಡ್ಡ ಮಟ್ಟದ ಹತ್ಯಾಕಾಂಡ ನಡೆಸಿದರು. ಕೊನೆಗೆ ಅದಕ್ಕೆ ಸಾಕಷ್ಟು ಜನರಿಗೆ ಶಿಕ್ಷೆಯೂ ಆಯಿತು. ನಿರಾಶ್ರಿತರಿಗೆ ಅಲ್ಪ ಪ್ರಮಾಣದ ಪರಿಹಾರವೂ ದೊರೆಯಿತು. ಅದನ್ನು ಹೊರತುಪಡಿಸಿದರೆ ಸಿಖ್ ಸಮುದಾಯ ಭಾರತದ ಗೌರವ ಎಂಬುದು ನಿಸ್ಸಂಶಯವಾಗಿ ದೃಢಪಟ್ಟಿದೆ….
ಎಂದಿನಂತೆ ನಮ್ಮ ದೇಶದ ಎರಡು ಪ್ರಬಲ ನೆರೆಹೊರೆಯ ದೇಶಗಳಾದ ಪಾಕಿಸ್ತಾನ ಮತ್ತು ಚೀನಾ ಜವಹರಲಾಲ್ ನೆಹರು ಕಾಲದಿಂದಲೂ ಭಾರತದ ಅಭಿವೃದ್ಧಿಯನ್ನು, ಬಲಿಷ್ಠತೆಯನ್ನು ಸಹಿಸುವುದಿಲ್ಲ. ನಮ್ಮ ಆಂತರಿಕ ತಿಕ್ಕಾಟಗಳಿಗೆ ತಮ್ಮ ಅಂತರಾಷ್ಟ್ರೀಯ ಏಜೆನ್ಸಿಗಳ ಮೂಲಕ ಪರೋಕ್ಷವಾಗಿ ಹಣ – ಶಸ್ತ್ರಾಸ್ತ್ರ ನೀಡಿ ಬೆಂಬಲಿಸುತ್ತಲೇ ಇರುತ್ತವೆ. ಅದು ಆ ದೇಶಗಳ ವಿದೇಶಾಂಗ ನೀತಿಯ ಭಾಗವೂ ಸಹ ಹೌದು….
ಭಾರತದಂತ ಬೃಹತ್ ದೇಶಕ್ಕೆ ಈ ರೀತಿಯ ಕೆಲವೇ ಜನರ ಪ್ರತ್ಯೇಕ ರಾಷ್ಟ್ರದ ಕೂಗನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವಿದೆ. ಆದರೆ ಪ್ರಾರಂಭಿಕ ಹಂತದಲ್ಲಿ ಕೇವಲ ಆಡಳಿತ ಸರ್ಕಾರ ಮಾತ್ರವಲ್ಲ ಇಡೀ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಇದನ್ನು ವಿರೋಧಿಸಬೇಕು. ಅದಕ್ಕಾಗಿ ಈಗಿನ ಸರ್ಕಾರ ಪಂಜಾಬ್ ಪ್ರಾಂತ್ಯದ ಆಡಳಿತ ಪಕ್ಷ ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾವುದೇ ನಿರ್ಲಕ್ಷ್ಯ ತೋರಬಾರದು.
ಒಮ್ಮೆ ಈ ರೀತಿಯ ಚಳವಳಿಗಳು ಸಾಮಾನ್ಯ ಜನರ ಭಾವನಾತ್ಮಕ ಬೆಂಬಲ ಗಳಿಸಿದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ನಿಯಂತ್ರಣ ಬರುವ ವೇಳೆಗಾಗಲೇ ಸಾಕಷ್ಟು ಹಿಂಸೆ ನಡೆದಿರುತ್ತದೆ……
ಸ್ವಾತಂತ್ರ್ಯ ನಂತರ ಭಾರತದ ಇತಿಹಾಸದಲ್ಲಿ ಬಹುಶಃ ಖಾಲಿಸ್ತಾನ ಚಳವಳಿಯೇ ಅತ್ಯಂತ ದೊಡ್ಡ ಪ್ರತ್ಯೇಕತವಾದದ ಹಿಂಸಾತ್ಮಕ ಸಂಘರ್ಷ. ಅದು ಮುಗಿದ ಅಧ್ಯಾಯ ಎಂದು ಭಾವಿಸಲಾಗಿತ್ತು. ಆದರೆ ಅದು ಮತ್ತೊಮ್ಮೆ ಚಿಗುರೊಡೆಯುವ ಮುನ್ನ ಚಿವುಟಿಯಾಕಬೇಕಿದೆ. ಇಲ್ಲದಿದ್ದರೆ ವಿದೇಶಿ ಶಕ್ತಿಗಳಿಗೆ ಮತ್ತೊಂದು ಅಸ್ತ್ರ ನೀಡಿದಂತಾಗುತ್ತದೆ.
ಇದಕ್ಕಾಗಿ ಕೇವಲ ಸೈನಿಕ ಶಕ್ತಿ ಬಳಸುವುದು ಮಾತ್ರವಲ್ಲ, ಇಡೀ ದೇಶದ ಜನ ಪಂಜಾಬಿನ ಜನರ ಜೊತೆ ನಿಲ್ಲಬೇಕಿದೆ. ಅವರ ಆತ್ಮ ಗೌರವಕ್ಕೆ ಕುಂದು ಬರದಂತೆ ನೋಡಿಕೊಳ್ಳಬೇಕಿದೆ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.