ಚಿಕ್ಕಮಗಳೂರು: ಜೆಡಿಎಸ್‌ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಪಕ್ಷ ಘೋಷಿಸಿದಂತೆ ಬಿಜೆಪಿಯು ಚುನಾವಣೆ ಮೊದಲೇ ಮುಖ್ಯಮಂತ್ರಿಯನ್ನು ಯಾರೆಂದು ಘೋಷಿಸಿ ಇಲ್ಲಸಲ್ಲದ ಹೇಳಿಕೆಗಳಿಗೆ ಸಿ.ಟಿ.ರವಿ ಮುಕ್ತಾಯ ಹಾಡಬೇಕು ಎಂದು ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ಸಿ.ಕೆ.ಮೂರ್ತಿ ಹೇಳಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಾರೆಂಬುದ ನ್ನು ತಿಳಿಸದೇ ಚುನಾವಣೆ ಎದುರಿಸುತ್ತಿದೆ.
ಆದರೆ, ಜೆಡಿಎಸ್ ಆ ರೀತಿಯ ಗೊಂದಲಗೊಳಗಾಗದೇ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿ ಚುನಾವಣೆಯನ್ನು ಧೈರ್ಯವಾಗಿ ಎದುರಿಸಲು ಸಜ್ಜಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಶಾಸಕರು ರಾಜ್ಯದ ಹಿರಿಯ ರಾಜಕಾರಣಿಗಳಿಗೆ ಇಲ್ಲಸಲ್ಲದ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿ ಕೊಳ್ಳಲು ಹಾಗೂ ಎತ್ತರಕ್ಕೆ ಬೆಳೆಯಲು ಪ್ರಯತ್ನಿಸುತ್ತಿದ್ದು ದೀಪ ಹೆಚ್ಚು ಉರಿದಂತೆ ಕೊನೆಯಲ್ಲಿ ಆರಲಿದೆ ಎಂಬಂತೆ ಶಾಸಕರು ಹೆಚ್ಚು ಮಾತನಾಡಿ ಕೊನೆಯಲ್ಲಿ ಸ್ಥಾನ ಕಳೆದುಕೊಳ್ಳುವ ಭಯದಲ್ಲಿ ಈ ರೀತಿ ವರ್ತಿಸು ತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬಿಜೆಪಿಯಲ್ಲಿ ಪ್ರಹ್ಲಾದ್ ಜೋಷಿ, ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಥವಾ ಇನ್ಯಾದರ ಹೆಸರನ್ನು ಹೇಳಿ ಚುನಾವಣೆ ಎದುರಿಸುವುದನ್ನು ಬಿಟ್ಟು ಜೆಡಿಎಸ್‌ನ ಧೀಮಂತ ನಾಯಕರ ವಿರುದ್ಧ ಹೇಳಿಕೆ ನೀಡಿ ಕಾಟಾಚಾರದ ಪ್ರಚಾರ ಗಿಟ್ಟಿಕೊಳ್ಳಲು ಮುಂದಾಗಿದೆ ಎಂದು ದೂರಿದ್ದಾರೆ.
ಇಪತ್ತು ವರ್ಷಗಳ ಕಾಲ ಕ್ಷೇತ್ರದಲ್ಲಿ ಶಾಸಕರಾಗಿರುವ ರವಿ ಅವರು ಜಿಲ್ಲೆಯ ಅಭಿವೃದ್ದಿ ವಿಚಾರವನ್ನಿಟ್ಟು ಕೊಂಡು ಚುನಾವಣೆ ಎದುರಿಸುತ್ತಿರುವ ಮುಂದಾಗಿದ್ದಾರೆ. ಬಸವನಹಳ್ಳಿ ಕೆರೆ, ಕೋಟೆ ಕೆರೆ ಕಾಮಗಾರಿಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಕೇವಲ ಮಣ್ಣನ್ನು ತೆಗೆದು ಹಾಕಿ ಟೆಂಡರ್ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಅಮೃತ ಯೋಜನೆ ಪ್ರಾರಂಭವಾಗಿ ಅನೇಕ ವರ್ಷಗಳು ಕಳೆದರೂ ಪೂರ್ಣವಾಗಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದು, ಕಳಪೆ ಕಾಮಗಾರಿ ಕೆಲಸವಾಗಿದೆ. ಇಷ್ಟೆಲ್ಲಾ ಕಳಪೆ ಕಾಮಗಾರಿ ಹಾಗೂ ಬಾರೀ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ಈ ಬಾರಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಸಂಘ-ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಜನವರಿ ಪ್ರಾರಂಭದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಹಂಚಿಕೆ ಮಾಡುತ್ತವೆ. ಆದರೆ ನಗರಸಭಾ ಆಡಳಿತ ಮಂಡಳಿಯು ಜನವರಿ ಕಳೆದು ಫ್ರೆಬವರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಪ್ರಶ್ನಿಸಿದ್ದಾರೆ.
ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳನ್ನು ಹೊತ್ತಿಕೊಂಡು ಸ್ಥಳೀಯ ಶಾಸಕರು ಚುನಾವಣೆ ಎದುರಿಸಲು ಭಯ ಪಡುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ರಾಜಕಾರಣಿಗಳ ಬಗ್ಗೆ ಹೇಳಿ ನೀಡಿ ಗೆಲ್ಲುವ ಕನಸು ಕಾಣುತ್ತಿದ್ದು ಇದನ್ನು ಜನತೆ ಸೂಕ್ಷ್ಮವಾಗಿ ಅರಿತು ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮತ ನೀಡಿ ಗೆಲುವಿಗೆ ವರದಾನವಾಗಲಿದ್ದಾರೆ ಎಂದು ತಿಳಿಸಿದ್ದಾರೆ.
