Friday, October 4, 2024
Friday, October 4, 2024

ಬ್ರಾಹ್ಮೀ ಮುಹೂರ್ತದಲ್ಲಿ ಸಾಗರ ಮಾರಿಕಾಂಬೆ ಜಾತ್ರೆ ಅದ್ಧೂರಿ ಆರಂಭ

Date:

ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಗೆ ಮಂಗಳವಾರ ಅದ್ಧೂರಿಯಾಗಿ ಚಾಲನೆ ದೊರಕಿತು. ಒಂಬತ್ತು ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆಯ ಮೊದಲ ದಿನದ ಸಾಂಪ್ರಾದಾಯಿಕ ಪೂಜಾ ವಿಧಿ ವಿಧಾನಗಳು ಬೆಳಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ನಡೆಯಿತು. ಜಾತ್ರೆಯ ಮೊದಲ ದಿನವೇ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.
ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯದಲ್ಲಿ ತಾಯಿ ಶ್ರೀ ಮಾರಿಕಾಂಬೆಯ ತಾಳಿ ಮತ್ತು ಆಭರಣಗಳಿಗೆ ಪೂಜೆ ಸಲ್ಲಿಸಲಾಯಿತು. ವಿಧಿವಿಧಾನಗಳನ್ನು ದೇವಾಲಯದ ಪ್ರಧಾನ ಅರ್ಚಕ ವಿದ್ವಾನ್ ಪಿ.ಎಲ್.ಗಜಾನನ ಭಟ್ ನೆರವೇರಿಸಿದರು. ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ನಂತರ ಸಂಪ್ರದಾಯದಂತೆ ಪುರೋಹಿತ ರಮೇಶ ಭಟ್ಟರ ಮನೆಯಲ್ಲಿ ಪೂಜಾ ಕಾರ್ಯಕ್ರಮ ನಡೆದವು.
ಶ್ರೀ ಮಹಾಗಣಪತಿ ದೇವಾಲಯದಿಂದ ಮಂಗಳವಾದ್ಯಗಳೊಂದಿಗೆ ಸಾಗರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಬಂದ ದೇವಿಯ ಆಭರಣಗಳನ್ನು ತವರುಮನೆಗೆ ತರಲಾಯಿತು. ಸಾಗರ ನಗರದ ತವರು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಅತ್ಯಾಕರ್ಷಕವಾದ ಶ್ರೀ ಮಾರಿಕಾಂಬಾ ವಿಗ್ರಹಕ್ಕೆ ವಿವಿಧ ಸಾಂಪ್ರಾದಾಯಿಕ ಆಚರಣೆಗಳನ್ನು ನಡೆಸಿ ಆಭರಣಗಳನ್ನು ತೊಡಿಸಲಾಯಿತು.
ಪೂಜಾ ಕಾರ್ಯಕ್ರಮದ ನಂತರ ತಾಯಿಯ ವಿಗ್ರಹಕ್ಕೆ ಭಾರಿ ಗಾತ್ರದ ಹಾರ ಸೇರಿದಂತೆ ವೈವಿಧ್ಯಮಯ ಹೂವಿನ ಅಲಂಕಾರ ನಡೆಸಿ ಮಹಾಮಂಗಳಾರತಿ ನಡೆಸಲಾಯಿತು. ನಂತರ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ತವರು ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಮಧುಕರ್ ಭಟ್, ಪುರೋಹಿತ ರಮೇಶ್ ಭಟ್, ಗಜಾನನ ಜೋಯ್ಸ್, ನೀಲಕಂಠ ಜೋಯ್ಸ್, ಸದಾಶಿವ ಜೋಯ್ಸ್, ರಾಘವೇಂದ್ರ ಭಟ್, ನವೀನ್ ಜೋಯ್ಸ್, ಸುಧೀಂದ್ರ ಜೋಯ್ಸ್, ಲಕ್ಷ್ಮಣ್ ಜೋಯ್ಸ್ ಇತರರು ಇದ್ದರು. ಗಣಪತಿ ದೇವಸ್ಥಾನದಿಂದ ಮಾರಿಕಾಂಬಾ ದೇವಸ್ಥಾನದ ತವರು ಮನೆಯವರೆಗೂ ಮೆರವಣಿಗೆಯಲ್ಲಿ ಸಾಗರದ ದೈವಜ್ಞ ಮಹಿಳಾ ಸಮಾಜದ ಸದಸ್ಯರು ಚಂಡೆವಾದನ ನಡೆಸಿಕೊಟ್ಟರು.
ಮೊದಲ ದಿನ ಮಂಗಳವಾರ ತವರು ಮನೆಯಲ್ಲಿ ಪೂಜೆ ನಡೆಯಲಿದೆ. ಫೆ. 8ರಿಂದ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿಯನ್ನು ಗಂಡನ ಮನೆ ಆವರಣದಲ್ಲಿ ಕೂರಿಸಲಾಗುತ್ತದೆ. ಫೆ. 15ರವರೆಗೂ ಗಂಡನ ಮನೆ ಆವರಣದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಉಡಿಸೇವೆ, ತುಲಾಭಾರ, ಸೇರಿದಂತೆ ಭಕ್ತರು ಹರಕೆ ಸಲ್ಲಿಸಲು ಜಾತ್ರಾ ಸಮಿತಿ ಪೂರಕ ವ್ಯವಸ್ಥೆ ಮಾಡಿದೆ.
ಒಂಬತ್ತು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜಾ ಕಾರ್ಯಗಳ ನಂತರ ಫೆ. 15 ರಂದು ರಾತ್ರಿ 10.30ಕ್ಕೆ ರಾಜಬೀದಿ ಉತ್ಸವ ನಡೆಯಲಿದೆ. ಶ್ರೀ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡಲಾಗುತ್ತದೆ. ರಾಜಬೀದಿ ಉತ್ಸವದಲ್ಲಿ ಪ್ರಸಿದ್ಧ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.

ಬಾಕ್ಸ್
ರಾತ್ರಿಯಿಂದಲೇ ದೇವರ ದರ್ಶನಕ್ಕೆ ಜನರ ಸಾಲು
ಶ್ರೀ ಮಾರಿಕಾಂಬಾ ಜಾತ್ರೆಯ ಮೊದಲ ದಿನದಂದು ತವರುಮನೆಯಲ್ಲಿ ಶ್ರೀ ಮಾರಿಕಾಂಬೆ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೋಮವಾರ ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ಸೋಮವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ನೂರಾರು ಜನರು ಸೇರಿದ್ದರು.

ಮಂಗಳವಾರ ಬೆಳಗಿನ ಜಾವ 1 ಗಂಟೆಯಿಂದಲೇ ಸರತಿ ಸಾಲು ಹೆಚ್ಚಾಗತೊಡಗಿತು. ಮಂಗಳವಾರ ಬೆಳಗ್ಗೆ ಪೂಜೆಯ ಸಂದರ್ಭದಲ್ಲಿ ದೇವರ ದರ್ಶನಕ್ಕೆ ನಿಂತಿದ್ದ ಸರದಿ ಸಾಲು ಸಾಗರ ಪಟ್ಟಣದ ಟೌನ್‌ಪೊಲೀಸ್ ಠಾಣೆ ದಾಟಿತ್ತು. ದೈವಜ್ಞ ಸಮಾಜದ ಯುವಕರು ಹಾಗೂ ಆನಂದ ಸಾಗರ ಟ್ರಸ್ಟ್ ವತಿಯಿಂದ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಚಹಾ, ಕಾಫಿ, ಬಾದಾಮಿ ಹಾಲನ್ನು ಉಚಿತವಾಗಿ ವಿತರಿಸಿದರು. ಜಾತ್ರೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಜಾತ್ರಾ ಸಮಿತಿಯಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಬಾಕ್ಸ್
ಕರ್ನಾಟಕ ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲಿ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯು ಒಂದಾಗಿದೆ. 14 ಅಡಿ ಎತ್ತರದ ತಾಯಿ ಮಾರಿಕಾಂಬಾ ಮೂರ್ತಿಯು ಅತ್ಯಂತ ವಿಶಿಷ್ಟತೆಯಿಂದ ಕೂಡಿತ್ತು. ತವರು ಮನೆಯಲ್ಲಿ ದೇವಿಯ ದರ್ಶನವನ್ನು ಭಕ್ತರು ಪಡೆದರು. ಜಾತ್ರಾ ಪ್ರಯುಕ್ತ ಹಾಕಲಾಗಿದ್ದ ಮಳಿಗೆಗಳಲ್ಲಿ ಮೊದಲ ದಿನ ಉತ್ತಮ ವ್ಯಾಪಾರ ವಹಿವಾಟು ನಡೆಯಿತು. ಇನ್ನೂ ಕೆಲವರು ಮಳಿಗೆಗಳ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು.
ಬಾಕ್ಸ್
ಫೆಬ್ರವರಿ 8ರ ಕಾರ್ಯಕ್ರಮ
ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರಸಭೆ ಆವರಣದ ಮಾರಿಕಾಂಬ ಕಲಾವೇದಿಕೆಯಲ್ಲಿ ಫೆ. 8ರಂದು ಸಂಜೆ 7ಕ್ಕೆ ಆಯೋಜಿಸಿರುವ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಶಾಸಕ ಹರತಾಳು ಹಾಲಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸುವರು.

ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ರಂಗಕರ್ಮಿ ಟಿ.ಎಸ್.ನಾಗಾಭರಣ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.

ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಕೆ.ಎಸ್.ಈಶ್ವರಪ್ಪ, ಕುಮಾರ್ ಬಂಗಾರಪ್ಪ, ಆಯನೂರು ಮಂಜುನಾಥ್, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಎಸ್.ಎಲ್.ಭೋಜೆಗೌಡ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಎಸ್‌ಪಿ ಮಿಥುನ್‌ಕುಮಾರ್, ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ರೋಹನ್ ಜಗದೀಶ್ ಉಪಸ್ಥಿತರಿರುವರು. ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಸಮಿತಿ ಸಂಚಾಲಕ ಲೋಕೇಶ್ ಕುಮಾರ್ ಗುಡಿಗಾರ್, ಸಹ ಸಂಚಾಲಕ ರಾಮಚಂದ್ರ ಜಿ.ನಾಗೇಶ್, ಉಪಾಧ್ಯಕ್ಷ ಸುಂದರ್‌ಸಿಂಗ್, ವಿ.ಶಂಕರ್, ರಾಮಪ್ಪ, ಸಹ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ, ಎಂ.ಡಿ.ಆನಂದ್, ಖಜಾಂಚಿ ನಾಗೇಂದ್ರ ಎಸ್.ಕುಮುಟಾ ಉಪಸ್ಥಿತರಿರುವರು.
ಬಾಕ್ಸ್
ಕಲಾಸಿರಿ ಕಾರ್ಯಕ್ರಮ
ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಿರ್ಮಿಸಿರುವ ನಗರಸಭೆ ಆವರಣದ ಮಾರಿಕಾಂಬಾ ಕಲಾವೇದಿಕೆಯಲ್ಲಿ ಫೆ. 8ರಂದು ಸಂಜೆ ಕಲಾಸಿರಿ ಕಾರ್ಯಕ್ರಮ ನಡೆಯಲಿದೆ. ಫೆ. 8ರ ಸಂಜೆ 5.30ರಿಂದ 6ರವರೆಗೆ ದೈವಜ್ಞ ಕಲಾಬಳಗದಿಂದ ಚಂಡೆವಾದನ, ಸಂಜೆ 6ರಿಂದ 6.30ರವರೆಗೆ ಡಾ. ಬಿ.ಆರ್.ಅಂಬೇಡ್ಕರ್ ಕೋಲಾಟ ಬಳಗದಿಂದ ಕೋಲಾಟ, 6.45ರವರೆಗೆ ಶ್ರೀ ಶಾರದಾಂಬ ಸಾಂಸ್ಕೃತಿಕ ಕಲಾಕೇಂದ್ರ ಟ್ರಸ್ಟ್ ವತಿಯಿಂದ ಭರತನಾಟ್ಯ, ನಂತರ ಸಭಾ ಕಾರ್ಯಕ್ರಮ, ರಾತ್ರಿ 8ರಿಂದ 9ರವರೆಗೆ ಪರಂಪರಾ ಫ್ಯೂಜನ್ ಬ್ಯಾಂಡ್‌ನಿಂದ ವಿವಿಧ ವಾದ್ಯಗಳ ಸಂಗೀತ ಕಾರ್ಯಕ್ರಮ, 9.30ರವರೆಗೆ ಫ್ರೆಂಡ್ಸ್ ಮ್ಯೂಸಿಕ್ ಮತ್ತು ಮೆಲೊಡಿಸ್ ಜ್ಯೂನಿಯರ್ ಕಲಾವಿದರಿಂದ ರಸಮಂಜರಿ, 10ರವರೆಗೆ ನಾಟ್ಯಮಯೂರಿ ನೃತ್ಯ ಕಲಾಕೇಂದ್ರದಿಂದ ಭರತನಾಟ್ಯ, ನಂತರ ಮಾಸ್ಟರ್ ಶಂಕರ್ ಕಲಾವೃಂದ ಟ್ರಸ್ಟ್ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಫೋಟೊ
ಸಾಗರ ನಗರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಮಾರಿಕಾಂಬಾ ದೇವಿಯ ಆಭರಣಗಳಿಗೆ ಪೂಜೆ ನಡೆಸಿ ಸಮಿತಿಯವರಿಗೆ ನೀಡಲಾಯಿತು. ವಿದ್ವಾನ್ ಗಜಾನನ ಭಟ್, ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Backward Classes Welfare Department ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ...

Klive Special Article ನವರಾತ್ರಿ ಎರಡನೇ ದಿನ.ದೇವಿಯ ಶ್ರೀಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ. ...

Klive Special Article "ದಧಾನಾಂ ಕರಪದ್ಮಾಭ್ಯಾಂಅಕ್ಷಮಾಲಾ ಕಮಂಡಲೂ/ದೇವಿ ಪ್ರಸೀದತು ಮಯಿಬ್ರಹ್ಮಚಾರಿಣ್ಯನುತ್ತಮಾ//ಮೊದಲನೆಯ ದಿನ...

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...