ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ವಹಿವಾಟಿನಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಗೆ ರಫ್ತು ಮಾಡಲು ಸಹಕಾರಿಯಾಗಿದೆ. ಇದರಿಂದ ದೇಶದ ರಫ್ತು ಹೆಚ್ಚಿಸಲು ಸಾಧ್ಯವಾಗಲಿದೆ.
ಎಂಎಸ್ಎಂಇ ಗಳು ಮಾರುಕಟ್ಟೆ ಪ್ರವೇಶಕ್ಕೆ ನಿರ್ಬಂಧ, ಆರಂಭಿಕ ಹೂಡಿಕೆಯ ಸವಾಲು, ಬೇಡಿಕೆಯಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿವೆ. ಈ ಸವಾಲುಗಳನ್ನು ಪರಿಹರಿಸಲು ಇ ಕಾಮರ್ಸ್ ಸಹಾಯಕಾರಿಯಾಗುತ್ತದೆ. ಇ-ಕಾಮರ್ಸ್ ವೇದಿಕೆಯು ಎಂಎಸ್ಎಂಇ ಗಳಿಗೆ ಜಾಗತಿಕ ಮಟ್ಟದಲ್ಲಿ ಗ್ರಾಹಕರನ್ನು ಸಂಪರ್ಕಿಸಲು ಸಹಾಯಕವಾಗುತ್ತದೆ. ಗಡಿಯಾಚೆಗಿನ ವ್ಯವಹಾರವನ್ನು ಹೆಚ್ಚಿಸಲು ಸುಲಭವಾಗುತ್ತದೆ. ಅಂತರಾಷ್ಟ್ರೀಯ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗುತ್ತದೆ.
ಏಳರಿಂದ ಎಂಟು ವರ್ಷಗಳ ಹಿಂದೆ ಎಂ.ಎಸ್.ಎಂ.ಇ ರಫ್ತು ವ್ಯವಹರಿಸಲು ಜಾಗತಿಕ ವ್ಯಾಪಾರ ಮೇಳಗಳಲ್ಲಿ ಭಾಗವಹಿಸಬೇಕಾಗಿತ್ತು. ಅಲ್ಲಿ ಆರ್ಡರ್ ಗಳನ್ನು ಬುಕ್ ಮಾಡಬೇಕಾಗುತ್ತಿತ್ತು. ಲಾಜಿಸ್ಟಿಕ್ಸ್, ಪೇಮೆಂಟ್ ಗೆ ಕಾಯುವುದು ಇತ್ಯಾದಿ ಸವಾಲುಗಳು ಎದುರಾಗುತ್ತಿದ್ದವು. ಆದರೆ ಈಗ ತಂತ್ರಜ್ಞಾನದ ಮುಖಾಂತರ ಇ-ಕಾಮರ್ಸ್ ಕ್ಷೇತ್ರ ವಿಸ್ತಾರವಾಗಿರುವುದರಿಂದ ಅಡಚಣೆಗಳನ್ನು ನಿವಾರಿಸಬಹುದಾಗಿದೆ.