ಸಂಘಟಿತರಾಗದ ಹೊರತು ಯಾವುದೇ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಪ್ರತೀ ಸಂಘಟನೆಯೂ ಕೂಡಾ ಒಂದು ಸವಾಲು ಎಂದು ಮಾಧ್ಯಮ ಅಕಾಡೆಮಿ ಸದಸ್ಯರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರೂ ಅದ ಕೆ. ವಿ. ಶಿವಕುಮಾರ್ ವಿಶ್ಲೇಷಿಸಿದರು.
ವಿಜಯಪುರದ ಕಂದಗಲ್ಲ ಹಣುಮಂತರಾಯ ರಂಗಮಂದಿರದಲ್ಲಿ ಆಯೋಜನೆಗೊಂಡ 32ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದ ಎರಡನೇ ದಿನದ ಸುದ್ದಿ ಮನೆ ಮತ್ತು ಪತ್ರಿಕಾ ವಿತರಕರು ಕುರಿತ ವಿಚಾರಗೋಷ್ಟಿಯಲ್ಲಿ, ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದಿಂದ ಹಲವು ಬಾರಿ, ಸೌಲಭ್ಯಗಳು ಘೋಷಣೆಯಾಗುತ್ತಿದ್ದರೂ, ನಿಜವಾಗಿ ಆ ಸೌಲಭ್ಯಗಳು ತಲುಪುವುದು ಸುಲಭವಾಗುವುದಿಲ್ಲ. ಇದಕ್ಕೆ ಸಂಘಟನೆಗಳು ಕೂಡಾ ರೂಪುರೇಷೆಗಳನ್ನು ಸಿದ್ಧಪಡಿಸುವಲ್ಲಿಯೂ ನಿರ್ಲಕ್ಷ್ಯ ತೋರಿರುವುದು ಸಹ ಸಮರ್ಥನೀಯ ಅಲ್ಲ ಎಂದರು.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಗೆ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಕಾಲದಲ್ಲಿ ಎರಡು ಕೋಟಿ ರೂ ಬಿಡುಗಡೆಯಾಗಿದ್ದು, ಆದರೆ, ಅದು ನಾನಾ ಕಾರಣಗಳಿಂದ ಈವರೆಗೆ ಬಳಕೆಯಾಗದೇ, ಖಜಾನೆಗೆ ಹಿಂತಿರುಗಿದೆ. ಇದಕ್ಕೆ ಬಹಳ ಮುಖ್ಯವಾಗಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಒಂದೆಡೆಯಾದರೆ, ನಿಯಮ-ರೂಪುರೇಷೆಗಳನ್ನು ಸಿದ್ಧಪಡಿಸದಿರುವುದೂ ಕೂಡ ಕಾರಣ ಎಂದ ಅವರು, ಈಗ ಅದನ್ನು ಮತ್ತೆ ಪಡೆಯುವುದು ಕಷ್ಟ ಸಾಧ್ಯ. ಆದರೆ, ಹೋರಾಟಗಳಿಂದ ವಿಮುಖರಾಗದೇ, ಎಲ್ಲಾ ಹದಿನೆಂಟು ಜಿಲ್ಲೆಗಳಲ್ಲಿ ಇರುವ ವಿತರಕರ ಸಂಘಟನೆಗಳು ಒಕ್ಕೂಟ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕೈಜೋಡಿಸಬೇಕಾಗಿದೆ. ಆಗ ಸಮಸ್ಯೆಗಳಿಗೈ ಪರಿಹಾರ ಕಂಡುಕೊಳ್ಳಲು ಸಾಧು ಎಂದರು.
ಹಲವು ಸಂಘಟನೆಗಳು, ಸಂಘಟನಾತ್ಮಕ ಪ್ರಯತ್ನ ನಡೆಸಿದಾಗ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದ ಅವರು, ಪತ್ರಕರ್ತರು ಕೂಡಾ, ತಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಕೇವಲ ತಮ್ಮ ಬರವಣಿಗೆ, ಕೇವಲ ಪತ್ರಿಕಾಗೋಷ್ಟಿಗಳಿಗಷ್ಟೇ ಮೀಸಲಾಗದೇ, ಸಮಸ್ಯೆಗಳ ಕಡೆ ಗಮನ ಹರಿಸಬೇಕು. ಯಾವುದೇ ಸರ್ಕಾರ ಅಽಕಾರದಲ್ಲಿರಲಿ, ಪ್ರತೀ ಪತ್ರಕರ್ತನೂ ಕೂಡಾ ವಿರೋಧ ಪಕ್ಷಗಳಂತೆ ಕೆಲಸ ಮಾಡಬೇಕೇ ವಿನಃ ಆಡಳಿತ ಪಕ್ಷದ ಜೊತೆ ಶಾಮೀಲಾಗಬಾರದು ಎಂದು ಎಚ್ಚರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಬುಲಿಂಗ ಮಾತನಾಡಿ, ಪತ್ರಿಕಾ ವಿತರಕರ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಸೌಲಭ್ಯಗಳು ಸಿಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 70 ಸಾವಿರ ಪತ್ರಿಕಾ ವಿತರಕರಿದ್ದು, ಉಚಿತ ಶಿಕ್ಷಣ, ಆರೋಗ್ಯ, ವಿಮೆ, ಪಿಂಚಣಿಯಂತಹ ಸೌಲಭ್ಯಗಳು ಸಿಗಬೇಕು. ವಿತಕರ ಒಕ್ಕೂಟವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ಎಲ್ಲ ಚಟುವಟಿಕೆಗಳೊಂದಿಗೆ ಕೈಜೋಡಿಸಲಾಗುವುದು ಎಂದರು.
ವಿಚಾರಗೋಷ್ಟಿಯನ್ನು ಬಿ. ವಿ. ಮಲ್ಲಿಕಾರ್ಜುನಯ್ಯ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ಅಕಾಡೆಮಿ ಸದಸ್ಯರಾದ ಸಿ. ಕೆ. ಮಹೇಂದ್ರ, ದೇವೇಂದ್ರಪ್ಪ ಕಪಣೂರ, ಜಗನ್ನಾಥ ಶೇಟ್ಟಿ ಬಾಳ ವಿಷಯ ಮಂಡಿಸಿದರು.
ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ಎನ್. ರವಿಕುಮಾರ್ (ಟೆಲೆಕ್ಸ್) ನಿರೂಪಿಸಿದರು.