ದೆಹಲಿ ವಾಯುಮಾಲಿನ್ಯ ನಿಯಂತ್ರಣದ ಕುರಿತು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಕಡ್ಡಾಯವಾಗಿ ಮಾಲಿನ್ಯ ತಡೆಯಲು ಹಲವು ಕಠಿಣ ಕ್ರಮಗಳನ್ನು ದೆಹಲಿ ಸರ್ಕಾರ ಕೈಗೊಂಡಿದೆ.
“ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿ ಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಅಗತ್ಯವಸ್ತುಗಳ ಸಾಗಾಣಿಕೆ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ, ಹಾಗೂ ಸರ್ಕಾರಿ ಕಚೇರಿಗಳಲ್ಲಿ ಶೇ.50 ರಷ್ಟು ಹಾಜರಾತಿ ಮುಂತಾದ ನಿಯಮಗಳನ್ನು ರೂಪಿಸಲಾಗಿದೆ,” ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂಕೋರ್ಟ್ ಗೆ ತಿಳಿಸಿದರು.
ಕಳೆದ ವರ್ಷ ಮಾಲಿನ್ಯದಿಂದಾಗಿ 54 ಸಾವಿರ ಜನ ಮೃತಪಟ್ಟಿದ್ದರು. ದೆಹಲಿ ಮಾಲಿನ್ಯದಿಂದಾಗಿ ಒಂದು ಲಕ್ಷ ಕೋಟಿ ರೂಪಾಯಿ ವಾರ್ಷಿಕ ನಷ್ಟವಾಗಿದೆ.
ದೆಹಲಿ ಸರ್ಕಾರವು ಮುಂದಿನ ಆದೇಶದವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಕಟ್ಟಡ ಕಾಮಗಾರಿಗಳನ್ನು ಸಂಪೂರ್ಣ ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ. ಸಾರ್ವಜನಿಕ ಸಾರಿಗೆ ಬಳಕೆ ಪ್ರೋತ್ಸಾಹಿಸಲು 1000 ಖಾಸಗಿ ಬಸ್ಸುಗಳನ್ನು ಬಾಡಿಗೆ ಪಡೆಯಲು ದೆಹಲಿ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರದ ಅಫಿಡೆವಿಟ್ ಪರಿಶೀಲಿಸಿದ ಸುಪ್ರೀಂಕೋರ್ಟ್ ನವೆಂಬರ್ 24ರಂದು ವಿಚಾರಣೆ ನಡೆಸಲು ತೀರ್ಮಾನಿಸಿದೆ.