Thursday, January 23, 2025
Thursday, January 23, 2025

ರನ್ ವೇ ಸಿದ್ಧವಾಗಿದೆ ಯುವಜನತೆ ಅಭಿವೃದ್ಧಿ ದಿಗಂತದೆಡೆ ಹಾರಬೇಕು- ಮೋದೀಜಿ

Date:

ಹುಬ್ಬಳ್ಳಿ: ಡಿಜಿಟಲ್ ಇಂಡಿಯಾದ ಪ್ರಸ್ತುತ ಕಾಲಘಟ್ಟದಲ್ಲಿ ಕೌಶಲ್ಯಭರಿತ ಯುವಜನತೆಗೆ ಅವಕಾಶಗಳ ಬಾಗಿಲು ತೆರೆದಿದೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”- ಎಂಬ ಸ್ವಾಮಿ ವಿವೇಕಾನಂದರ ಮಂತ್ರವನ್ನು ಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ದಿಗಂತದ ಕಡೆಗೆ ದೇಶವನ್ನು ಕೊಂಡೊಯ್ಯಲು ಯುವಸಮುದಾಯ ಕೈಜೋಡಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು ಕರೆ ನೀಡಿದರು.

“ವಿಕಸಿತ ಯುವ-ವಿಕಸಿತ ಭಾರತ” ಎಂಬ ಘೋಷವಾಕ್ಯದೊಂದಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ಜನವರಿ 12 ರಿಂದ 16 ರವರೆಗೆ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಮೂರುಸಾವಿರ ಮಠ , ಸಿದ್ಧಾರೂಢ ಮಠ ಇಂತಹ ಅನೇಕ ಮಠಗಳ ಕ್ಷೇತ್ರಗಳಿಗೆ ನನ್ನ ನಮಸ್ಕಾರಗಳು..
ಚೆನ್ನಮ್ಮನ ನಾಡು, ರಾಯಣ್ಙನ ಬೀಡು ಪುಣ್ಯದ ನಾಡಿಗೆ ನನ್ನ ನಮಸ್ಕಾರಗಳು…. ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು, ದೇಶದ ಪ್ರಗತಿಯಲ್ಲಿ ಯುವಕರ ಪಾತ್ರವನ್ನು ಮನದಟ್ಟು ಮಾಡಿಕೊಟ್ಟರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಸೇರಿದಂತೆ ಅನೇಕ ಸಂಗೀತ ಲೋಕದ ದಿಗ್ಗಜರನ್ನು ಸ್ಮರಿಸಿದರು.

“ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”- ಎಂಬ ಸ್ವಾಮಿ ವಿವೇಕಾನಂದರ ಮಂತ್ರವನ್ನು ಕನ್ನಡದಲ್ಲಿ ಉಚ್ಛರಿಸಿದ ಪ್ರಧಾನಮಂತ್ರಿ ಮೋದೀಜಿಯವರು, ಇಂತಹ ಸಂದರ್ಭದಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಅರಿತುಕೊಂಡ ದೇಶವನ್ನು ಮುನ್ನಡೆಸಬೇಕಿದೆ ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಸ್ವಾಮಿ ವಿವೇಕಾನಂದರು ಕರ್ನಾಟಕದ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಬೆಂಗಳೂರು, ಹುಬ್ಬಳ್ಳಿ-ಧಾರವಾಡದಲ್ಲಿ ಸಂಚರಿಸಿದ್ದರು. ಮೈಸೂರು ಮಹಾರಾಜರು ವಿವೇಕಾನಂದ ಅವರು ಶಿಕ್ಯಾಗೊ ಸಮ್ಮೇಳನ ಹೋಗಲು ನೆರವು ನೀಡಿದ್ದರು ಎಂದು ನೆನಪಿಸಿದರು.

ಏಕ ಭಾರತ ಶ್ರೇಷ್ಠ ಭಾರತ ನಿರ್ಮಾಣಕ್ಕೆ ದೇಶವು ಹೊಸ ಸಂಕಲ್ಪದಿಂದ ಮುನ್ನಡೆದಿದೆ. ಯುವ ಶಕ್ತಿ ಸದೃಢವಾಗಿದ್ದರೆ ಸದೃಢ ದೇಶ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು.

ಚೆನ್ನಮ್ಮ ಎಂತಹ ಸಂಕಷ್ಟದ ಕಾಲದಲ್ಲೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸಂಗೊಳ್ಳಿ ರಾಯಣ್ಣನ ಶೌರ್ಯವು ಬ್ರಿಟಿಷ್ ರ ಎದೆ ನಡುಗಿಸಿತ್ತು ಇಂತಹ ಮಹನೀಯರ ದೇಶಭಕ್ತಿ ನಮಗೆ ಆದರ್ಶವಾಗಬೇಕಿದೆ.

ವಿಶ್ವೇಶ್ವರಯ್ಯ ಅವರು ತಮ್ಮ ಪ್ರತಿಭೆಯ ಮೂಲಕ ಯುವ ಸಮುದಾಯವು ಹೇಗೆ ಎಲ್ಲೆಡೆ ಪಸರಿದೆ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ಗಣಿತದಿಂದ ವಿಜ್ಞಾನದ ಯಾವುದೇ ಸ್ಪರ್ಧೆ ನಡೆದರೂ ಭಾರತೀಯರ ಸಾಧನೆ ಅದ್ವಿತೀಯ.
ಇದು ಭಾರತದ ಯುವಶಕ್ತಿಯ ಸಂಕೇತವಾಗಿದೆ. ಯುವಶಕ್ತಿ ದೇಶವನ್ನು ನಡೆಸುವ ಶಕ್ತಿಯಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತಕ್ಕೆ ಯುವಶಕ್ತಿ ದಿಕ್ಸೂಚಿಯಾಗಲಿದೆ ಎಂದರು.

ನಮ್ಮ ಚಿಂತನೆ ಹಾಗೂ ಪ್ರಯತ್ನಗಳು ಸಕಾರಾತ್ಮಕವಾಗಿ ಇರಬೇಕು. ಜಗತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಭಾರತದ ಕಡೆ ನೋಡುತ್ತಿದೆ. ಇದರ ಹಿಂದೆ ಯುವಶಕ್ತಿಯ ಶ್ರಮವಿದೆ.

ಭಾರತವು ಜಗತ್ತಿನ 5 ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಇದನ್ನು ಅಗ್ರ ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ನಮ್ಮದಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಭಾರತವು ಜಗತ್ತಿನ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ಯುವ ಜನತೆಗೆ ಇನ್ನಷ್ಟು ಅವಕಾಶಗಳು ಲಭಿಸಲಿವೆ.

ಕ್ರೀಡಾ ಕ್ಷೇತ್ರದಲ್ಲಿ ಭಾರತವು ಪ್ರಕಾಶಿಸುತ್ತಿರುವುದಕ್ಕೆ ಯುವ ಸಮುದಾಯದ ಪ್ರಯತ್ನವೇ ಕಾರಣವಾಗಿದೆ.
ಇದೊಂದು ವಿಶೇಷ ಅವಕಾಶ. ಈಗಿರುವುದು ವಿಶೇಷ ಪೀಳಿಗೆ ಆಗಿದೆ. ದೇಶದ ಆರ್ಥಿಕತೆ ಸುಧಾರಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ.
ಇದೀಗ ರನ್ ವೇ ಸಿದ್ಧವಾಗಿದೆ. ಯುವ ಸಮಯದಾಯ ಇದನ್ನು ಬಳಸಿಕೊಂಡು ಅಭಿವೃದ್ಧಿಯ ದಿಗಂತದ ಕಡೆಗೆ ಹಾರಲು ಮುಂದಾಗಬೇಕಿದೆ ಎಂದರು.

ಸ್ತ್ರೀಶಕ್ತಿಯು ರಾಷ್ಟ್ರಶಕ್ತಿಯನ್ನು ಮುನ್ನಡೆಸುವಲ್ಲಿ ಸಫಲರಾಗಿದ್ದಾರೆ. ಫೈಟರ್ ಜೆಟ್ ಹಾರಿಸುತ್ತಿರುವ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ.

ಯುವಜನತೆ ವರ್ತಮಾನದಲ್ಲಿದ್ದಕೊಂಡು ಭವಿಷ್ಯದ ಕಡೆ ಸಕಾರಾತ್ಮಕವಾಗಿ ಯೋಚಿಸುವ ಮೂಲಕ ಹೊಸ ಹೊಸ ಆವಿಷ್ಕಾರಗಳತ್ತ ಚಿತ್ತವನ್ನು ಹರಿಸಬೇಕು.

10 ವರ್ಷಗಳ ಇಲ್ಲದ ಎಷ್ಟೋ ವಿಷಯಗಳಿಂದ ನಾವು ಈಗ ಚಕಿತರಾಗಿದ್ದೇವೆ ಈಗ ಸೈಬರ್ ಸೆಕ್ಯುರಿಟಿ, ಡೇಟಾ‌ ಸೈನ್ಸ್, ದೇಶದ ಸುರಕ್ಷತೆ ಸೇರಿ ಎಲ್ಲದರ ಸ್ವರೂಪ ಬದಲಾಗಿದೆ. ಯುವಸಮುದಾಯವು ತಂತ್ರಜ್ಞಾನದ ಈ ಬದಲಾವಣೆಯಿಂದ ಪಾಠ ಕಲಿತು ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಪ್ರಸ್ತುತ ದಿನಗಳಲ್ಲಿ ಯುವಶಕ್ತಿಯ ಮುಂದೆ ಹತ್ತಾರು ಅವಕಾಶಗಳಿವೆ. ಆಯ್ಕೆ ಅವರ ಮುಂದಿದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಯುವಕರು ವೈಯಕ್ತಿಕ ಸಾಧನೆಯ ಜೊತೆಗೆ ಸಾಂಸ್ಥಿಕ ಹಾಗೂ ಅನ್ವೇಷಣೆ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ಕೊರೋನಾ ಲಸಿಕೆ ಹೀಗೆ ಪ್ರತಿಯೊಂದು ಮಜಲುಗಳಲ್ಲಿ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ ಭಾರತದ ಈ ಸಾಧನೆಯ ಬಗ್ಗೆ ಜಗತ್ತಿನಲ್ಲಿ ಈಗ ಚರ್ಚೆ ನಡೆದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mallikarjun Kharge ಸಂವಿಧಾನ & ಪ್ರಜಾಪ್ರಭುತ್ವ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು- ಮಲ್ಲಿಕಾರ್ಜುನ ಖರ್ಗೆ

Mallikarjun Kharge ಬೆಳಗಾವಿ, ಜ.21 ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ...

MESCOM ಜನವರಿ 24. ಶಿವಮೊಗ್ಗ ನಗರ ಉಪವಿಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ – 3 ಕಛೇರಿಯಲ್ಲಿ ಜ....