ಹಳ್ಳಿಗಾಡಿನ ಪದಗಟ್ಟಗಳನ್ನು ತಮ್ಮ ಕವಿತೆಗಳ ಮೂಲಕ ಸಹೃದಯರಿಗೆ ಪರಿಚಯಿಸಿದವರು ಕವಿ ದೊಡ್ಡ ರಂಗೇಗೌಡರು. ಸಾಹಿತ್ಯ ಸಂವಹನದಲ್ಲಿ ಕೇವಲ ಮುದ್ರಣ ಮಾಧ್ಯಮಕ್ಕೆ ಅವರು ತಮ್ಮನ್ನು ಕಟ್ಟಿ ಹಾಕಿಕೊಳ್ಳಲಿಲ್ಲ. ಅತ್ಯಂತ ಪರಿಣಾಮವಾಗಿ ಮಾಧ್ಯಮ ಚಲನಚಿತ್ರಗಳಲ್ಲಿ ತಮ್ಮ ಕವಿತೆಗಳಲ್ಲಿ ಹಳ್ಳಿಯ ಸೊಗಡನ್ನ ತುಂಬಿದವರು.
ಪ್ರಸ್ತುತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜರುಗುತ್ತಿದೆ. ಕವಿ ದೊಡ್ಡರಂಗೇಗೌಡರದ್ದು ಸರ್ವಾಧ್ಯಕ್ಷತೆ.
ಈಗ ನಮ್ಮ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೂ ಕನ್ನಡಕ್ಕೆ ಸರ್ಕಾರದಿಂದ ಆದದ್ದೇನು? ಎಂದು ತಮ್ಮ ಅಧ್ಯಕ್ಷ ಭಾಷಣದಲ್ಲಿ ಕನ್ನಡದ ಅಭಿಮಾನ ತೋರಿಸದ ಡಬಲ್ ಇಂಜಿನ್ ಸರ್ಕಾರಕ್ಕೆ ಮಾತಿನ ಈಟಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ನಡದ ಶಾಸ್ತ್ರೀಯ ಭಾಷಾ ಬೆಳವಣಿಗೆಯ ಬಗ್ಗೆ ಸಿಗಬೇಕಾದ ಅನುದಾನ ನೀಡುವಲ್ಲಿ ಸರ್ಕಾರ ಸಾಕಷ್ಟು ಮಂಜೂರು ಮಾಡಿಲ್ಲ ಎಂದು ತಮ್ಮ ಕವಿ ಶೈಲಿಯಲ್ಲೇ ಎಚ್ಚರಿಸಿದ್ದಾರೆ.
ಸಂಸ್ಕೃತ, ತಮಿಳು ಭಾಷೆಗೆ ಕಳೆದ ಮೂರು ವರ್ಷಗಳಲ್ಲಿ 40 ರಿಂದ 50 ರೂಪಾಯಿ ಕೋಟಿ ಅನುದಾನ ನೀಡಲಾಗಿದೆ. ಆದರೆ ನಮ್ಮ ಕನ್ನಡಕ್ಕೆ ಅದು ಎರಡಂಕಿಯನ್ನೂ ಮುಟ್ಟಿಲ್ಲ ಎಂದು ವಿಷಾದಿಸಿದ್ದಾರೆ.
ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಗಡಿ ಸಮಸ್ಯೆ ಬಗ್ಗೆ ಅಧ್ಯಕ್ಷರು ಉಲ್ಲೇಖಿಸುತ್ತಾರೆ. ಈ ಬಾರಿ ದೊಡ್ಡ ರಂಗೇಗೌಡರು ಬೆಳಗಾವಿಯ ಒಂದಂಗುಲವನ್ನೂ ಬಿಡೆವು ಎಂದು ಘೋಷಿಸಿ ಕನ್ನಡಿಗರ ಕನ್ನಡ ಪ್ರೀತಿಯನ್ನು ಜಾಗೃತಗೊಳಿಸಿದ್ದಾರೆ.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಉಲ್ಲೇಖಿಸಿ ಈರ್ವರೂ ಇದಕ್ಕೆ ಪರಿಹಾರ ಹುಡುಕಬೇಕು ಎಂದು ಸೂಚಿಸಿದ್ದಾರೆ.
ಕನ್ನಡ ಪರ ಹೋರಾಟಗಾರರ ಬಗ್ಗೆ ಪ್ರಸ್ತಾಪಿಸಿ ಅವರನ್ನು ಯಾಕೆ ಜೈಲಿಗೆ ಹಾಕುತ್ತಿರಿ ? ಅವರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಮುಖ್ಯಮಂತ್ರಿಗಳನ್ನು ಕೋರಿದರು.
ಅವರ ಮಾತಿನಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ಅಂತಃಕರಣ ತುಂಬಿತ್ತು.