ಸೊರಬ: ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೇ ಪತ್ರಿಕಾ ವಿತರಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಪತ್ರಿಕಾ ವಿತರಕರಿಗೆ ಸರ್ಕಾರ ಜೀವನ ಭದ್ರತೆ ಒದಗಿಸಬೇಕು ಎಂದು ಪತ್ರಕರ್ತ ಮಹೇಶ್ ಗೋಖಲೆ ಒತ್ತಾಯಿಸಿದರು.
ಪಟ್ಟಣದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಸೊರಬದಲ್ಲಿ 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳು, ಅಂತರ್ಜಾಲ ಪತ್ರಿಕೋದ್ಯಮದ ಪೈಪೋಟಿಯ ನಡುವೆ ಪತ್ರಿಕೆಗಳು ಮುದ್ರಣವಾಗುವವರೆಗೂ ಹಲವು ಹಂತದಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. ಆದರೆ, ಮುದ್ರಣಗೊಂಡ ಪತ್ರಿಕೆಗಳನ್ನು ಓದುಗನ ಮನೆ ಬಾಗಿಲಿಗೆ ತಲುಪಿಸುವ ಪತ್ರಿಕಾ ವಿತರಕರು ಪತ್ರಿಕೆಗಳಿಗೆ ಕಳಸವಿದ್ದಂತೆ ಎಂದರೆ ತಪ್ಪಾಗಲಾರದು. ಪತ್ರಿಕೆಗಳು ನೀಡುವ ಕಮಿಷನ್ ಆಧಾರದಲ್ಲಿ ಕಾರ್ಯನಿರ್ವಹಿಸುವ ಪತ್ರಿಕಾ ವಿತರಕರಿಗೆ ಜೀವನ ಭದ್ರತೆ, ನಿವೇಶನ, ವಾಹನ ಸೌಲಭ್ಯ, ವೃದ್ಧಾಪ್ಯದಲ್ಲಿ ವೇತನ ಸೇರಿದಂತೆ ಸರ್ಕಾರದಿಂದ ಸಾಧ್ಯವಾದಷ್ಟು ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ಶಾಖೆ ಉಪಾಧ್ಯಕ್ಷ ಮುಹಮ್ಮದ್ ಆರೀಫ್, ಸದಸ್ಯ ಮಧುಕೇಶ್ವರ್, ಪತ್ರಿಕಾ ವಿತರಕರಾದ ಸುರೇಶ್, ಪುರುಷೋತ್ತಮ ಚಂದ್ರಗುತ್ತಿ ಸೇರಿದಂತೆ ಇತರರಿದ್ದರು.