2050ರಲ್ಲಿ ಶಿವಮೊಗ್ಗ ನಗರ ಹಾಗೂ ಜಿಲ್ಲೆಗೆ ಅವಶ್ಯವಿರುವ ಯೋಜನೆ ಹಾಗೂ ಕಲ್ಪನೆಯ ಶಿವಮೊಗ್ಗಕ್ಕೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸಮರ್ಪಕ ಯೋಜನೆಗಳನ್ನು ಸರ್ಕಾರದ ಹಂತದಲ್ಲಿ ಅನುಷ್ಠಾನಗೊಳಿಸಲು ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರದ ಪ್ರಮುಖರೊಂದಿಗೆ ಸಂವಾದ ಹಾಗೂ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ, ಉದ್ಯಮ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಸಾಂಸ್ಕೃತಿಕ, ಕೈಗಾರಿಕಾ ಕ್ಷೇತ್ರಗಳಲ್ಲಿ 2050ರಲ್ಲಿ ಶಿವಮೊಗ್ಗದಲ್ಲಿ ಅವಶ್ಯವಿರುವ ಸೌಕರ್ಯಗಳನ್ನು ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಾಗೂ ಶಿವಮೊಗ್ಗ ಸದೃಢವಾಗಿ ಬೆಳೆಯಲು ಸೂಕ್ತ ಪರಿಕಲ್ಪನೆ ಅಗತ್ಯ. ಎಲ್ಲರ ಅಭಿಪ್ರಾಯದಿಂದ ಸ್ಪಷ್ಟ ಚಿತ್ರಣ ದೊರೆಯಬಹುದಾಗಿದೆ ಎಂದು ತಿಳಿಸಿದರು.
ಕಲೆ, ಸಂಸ್ಕೃತಿ, ಇತಿಹಾಸ ಪರಂಪರೆ ಹೊಂದಿದ ಸ್ಥಳಗಳನ್ನು ಸಂರಕ್ಷಿಸಬೇಕು. ಸಾಹಿತ್ಯ, ಸಾಂಸ್ಕೃತಿಕ, ನೃತ್ಯ, ಸಂಗೀತ ಕ್ಷೇತ್ರಗಳಿಗೆ ಸುಸಜ್ಜಿತ ರಂಗಮಂದಿರ ನಿರ್ಮಾಣವಾಗಬೇಕು. ಸ್ವಚ್ಛ, ಉತ್ತಮ ಹಾಗೂ ಹಸಿರು ವಾತಾವರಣ ಕಾಪಾಡಿಕೊಳ್ಳಬೇಕು. ಸೌರಶಕ್ತಿಯ ಸದ್ವಿನಿಯೋಗವಾಗುವ ಯೋಜನೆಗಳು ಬೇಕು ಎಂದು ಪ್ರಮುಖರು ಅಭಿಪ್ರಾಯಪಟ್ಟರು.
ಎಜುಕೇಷನ್, ಕೈಗಾರಿಕಾ, ಪ್ರವಾಸಿ ಹಬ್ ಆಗಿ ಶಿವಮೊಗ್ಗ ರೂಪುಗೊಳ್ಳಬೇಕು. ಜನಸಂಖ್ಯೆಗೆ ಅನುಗುಣವಾಗಿ ರಸ್ತೆ ಹಾಗೂ ಮೂಲಸೌಕರ್ಯ ನಿರ್ಮಾಣವಾಗಬೇಕು. ಕ್ರೀಡಾಸೌಕರ್ಯ ಮಕ್ಕಳಿಗೆ ಒಂದೇ ವೇದಿಕೆಯಲ್ಲಿ ಸಿಗುವಂತೆ ಆಗಬೇಕು. ಸ್ಥಳಿಯ ಉದ್ಯಮಗಳಿಗೆ ಸೂಕ್ತ ಪ್ರೋತ್ಸಾಹ ಹಾಗೂ ಮಾರುಕಟ್ಟೆ ವ್ಯವಸ್ಥೆ ಸಿಗಬೇಕು ಸೇರಿದಂತೆ ವೈವಿಧ್ಯಮಯ ಅಭಿಪ್ರಾಯಗಳು ವ್ಯಕ್ತವಾದವು.
ಶಿವಮೊಗ್ಗ ವಿಷನ್ 2050 ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಜನರು, ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣತರು ತಮ್ಮ ಕ್ಷೇತ್ರಗಳಲ್ಲಿ ಆಗಬೇಕಿರುವ ಪರಿಕಲ್ಪನೆಯನ್ನು shivamoggavision2050@gmail.com ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.
ಒಂದು ನಿಮಿಷದ ವಿಡಿಯೋ ಮುಖಾಂತರ ಕೂಡ ಅಭಿಪ್ರಾಯ ನೀಡಬಹುದು ಎಂದು ಎನ್.ಗೋಪಿನಾಥ್ ಹೇಳಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಸಂವಾದ ನಡೆಸಿಕೊಟ್ಟರು. ಎಲ್ಲ ಕ್ಷೇತ್ರದ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿದರು. ವಸಂತ್ ಹೋಬ್ಳಿದಾರ್, ಡಾ. ಶೇಖರ್ ಗೌಳೇರ್, ಎನ್.ವಿ.ಭಟ್, ಸಹನಾ ಚೇತನ್, ಡಾ. ಅಭಿಲಾಷ್, ಡಾ. ಭರತ್, ಡಾ. ರೂಪಾ, ಅರ್ಚನಾ, ಎಂ.ಎನ್.ಸುಂದರ್‌ರಾಜ್, ನಿರ್ಮಲ ಕಾಶಿ, ಪ್ರದೀಪ್ ಎಲಿ, ಶ್ರೀಪಾಲ್, ಪಲ್ಲವಿ, ಅ.ನಾ.ವಿಜಯೇಂದ್ರ, ಡಾ. ಪ್ರೇರಣಾ ಮತ್ತಿತರರು ಉಪಸ್ಥಿತರಿದ್ದರು.