ಮಕ್ಕಳಲ್ಲಿರುವ ಕಲಿಕಾ ನೂನ್ಯತೆಗಳನ್ನು ಆರಂಭದಲ್ಲಿಯೇ ಗುರುತಿಸಿ ಸರಿಪಡಿಸುವ ಕೆಲಸ ಆಗಬೇಕು. ಇದರಿಂದ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಅತ್ಯಂತ ಸಹಕಾರಿ ಆಗುತ್ತದೆ ಎಂದು ಮನೋವೈದ್ಯೆ ಡಾ. ಕೆ.ಎಸ್.ಶುಭ್ರತಾ ಹೇಳಿದರು.
ರಾಜೇಂದ್ರ ನಗರದಲ್ಲಿರುವ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ರೋಟರಿ ಪೂರ್ವ ಆಂಗ್ಲ ಪ್ರೌಢಶಾಲೆ, ಇಂಟರ‍್ಯಾಕ್ಟ್ ಕ್ಲಬ್, ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ, ಕ್ಷೇಮ ಟ್ರಸ್ಟ್ ವತಿಯಿಂದ ಶಿಕ್ಷಕರಿಗೆ ಹಮ್ಮಿಕೊಳ್ಳಲಾದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳು ಕಲಿಕಾ ಸಾಮಾರ್ಥ್ಯವನ್ನು ನಿರಂತರವಾಗಿ ಗಮನಿಸುತ್ತಿರಬೇಕು. ನೂನ್ಯತೆ ಅನುಭವಿಸುತ್ತಿರುವುದು ಕಂಡುಬಂದಲ್ಲಿ ಗುರುತಿಸಿ ಸರಿಪಡಿಸಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಹೆಚ್ಚಿಸುವ ಜತೆಯಲ್ಲಿ ಜ್ಞಾನ ಸಾಮಾರ್ಥ್ಯ ವೃದ್ಧಿಸಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಕಲಿಕಾ ಸಮಸ್ಯೆಯು ಮೆದುಳಿನಲ್ಲಿನ ಬೆಳವಣಿಗೆಯ ತೊಂದರೆಯಿಂದ ಉಂಟಾಗುತ್ತದೆ. ಇಂತಹ ಸಮಸ್ಯೆ ಇರುವ ಮಕ್ಕಳ ಕಲಿಕೆಯಲ್ಲಿನ ಸಾಮಾರ್ಥ್ಯವು ಇತರ ಮಕ್ಕಳಿಗಿಂತ ಎರಡು ಮೂರು ವರ್ಷದಷ್ಟು ಹಿಂದಿರುತ್ತದೆ. ಓದುವಾಗ, ಬರೆಯುವಾಗ, ಲೆಕ್ಕ ಮಾಡುವಾಗ ನಿಧಾನಿಸುತ್ತಾರೆ. ಸರಳವಾದ ಗಣಿತ ಲೆಕ್ಕ ಮಾಡಲು ಸಹ ವಿಫಲರಾಗುತ್ತಾರೆ. ಭಾಷೆ ಬರವಣಿಗೆಯಲ್ಲಿ ಒತ್ತಕ್ಷರ ಬರೆಯುವುದಿಲ್ಲ. ಹೀಗೆ ವಿವಿಧ ರೀತಿಯಲ್ಲಿ ಸಮಸ್ಯೆ ಎದುರಾಗುತ್ತದೆ.
ಶಿಕ್ಷಕರು ಕೂಡಲೇ ಗಮನಹರಿಸಿ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ವಿಶೇಷ ರೀತಿಯ ಕಲಿಕಾ ಕ್ರಮದಿಂದ ಮಕ್ಕಳಲ್ಲಿನ ಕಲಿಕಾ ನೂನ್ಯತೆ ಸಮಸ್ಯೆ ಸರಿಪಡಿಸಬಹುದು. ವೈದ್ಯರ ಮಾರ್ಗದರ್ಶನವು ಅತ್ಯಂತ ಅವಶ್ಯಕ. ಮಕ್ಕಳಿಗೆ ಶಿಕ್ಷಕರು ಹಾಗೂ ವೈದ್ಯರ ಸರಿಯಾದ ಮಾರ್ಗದರ್ಶನ ದಿಂದ ಮಕ್ಕಳ ಸಮಸ್ಯೆ ಸರಿಪಡಿಸಬಹುದು ಎಂದು ಅಭಿಪ್ರಾಯಪಟ್ಟರು.
ರೋಟರಿ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾಂ, ಸೂರ್ಯನಾರಾಯಣ್, ಜಯಶೀಲಬಾಯಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.