ರಾಷ್ಟ್ರ ಕವಿ ಕುವೆಂಪುರವರ 118ನೇ ಜನುಮ ದಿನದ ಅಂಗವಾಗಿ, ನಗರದ ಪ್ರತಿಷ್ಟಿತ ಡಯಾನಾ ಬುಕ್ ಗ್ಯಾಲರಿಯಲ್ಲಿ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕವಿಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ, ಕರ್ನಾಟಕ ಸಂಘದ ಅಧ್ಯಕ್ಷರು, ಅಂಕಣಕಾರರೂ ಆದ ಎಂ. ಎನ್. ಸುಂದರ ರಾಜ್‌ರವರು, ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ರಾಮಾಯಣ ದರ್ಶನಂ ಕುರಿತು ಸಾಂದರ್ಭಿಕ ಕ್ಷಣಗಳನ್ನು ಮೆಲಕು ಹಾಕಿದರು.
ಪುಸ್ತಕ ಮಳಿಗೆಯಲ್ಲಿ ಈ ನಾಡು ಕಂಡ ಶ್ರೇಷ್ಟ ಸಾಹಿತಿ ಕುವೆಂಪುರವರ ಜನುಮ ದಿನವನ್ನು ಆಪ್ತರು, ಪುಸ್ತಕ ಪ್ರೇಮಿಗಳ ನಡುವೆ ಆಚರಿಸುತ್ತಿರುವುದು ಅನುಕರಣೀಯ ಎಂದು ಮುಕ್ತಕಂಠದಿಂದ ಪ್ರಶಂಸಿಸಿ ಮುಂದಿನ ದಿನಗಳಲ್ಲಿ ಶ್ರೇಷ್ಟ ಸಾಹಿತಿಗಳು, ಚಿಂತಕರು, ದಾರ್ಶನಿಕರು, ಸಾಧಕರ ಜನುಮ ದಿನಗಳನ್ನು ಆಚರಿಸಿ, ಅವರೆಲ್ಲರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ದಾಟಿಸುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಶ್ರೀಮದ್ ರಂಭಾಪುರಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಧರ್ಮೇಗೌಡ, ಕಮಲಾ ನೆಹರೂ ಕಾಲೇಜಿನ ಪ್ರಾಚಾರ್ಯ ಡಾ. ಎಚ್. ಎಸ್. ನಾಗಭೂಷಣ, ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ, ಹಿರಿಯ ಪತ್ರಕರ್ತ ವೈದ್ಯ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಓದುಗರು, ಪುಸ್ತಕ ಪ್ರಿಯರು, ಗ್ರಾಹಕರು, ಬುಕ್ ಗ್ಯಾಲರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಯಾನಾ ಬುಕ್ ಗ್ಯಾಲರಿಯ ಕೆ. ಎಲ್ ಈಶ್ವರ್ (ಡಯಾನಾ) ಸ್ವಾಗತಿಸಿದರು.