ಕ್ಯಾನ್ಸರ್ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಬೇಕಿರುವುದು ಅತ್ಯಂತ ಅವಶ್ಯಕ. ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಗುಣಪಡಿಸಿಕೊಳ್ಳಲು ಪ್ರಯತ್ನ ನಡೆಸಬೇಕು ಎಂದು ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಗೌರವ ಕಾರ್ಯದರ್ಶಿ ಡಾ. ದಿನೇಶ್ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ, ಚಂದ್ರಗಿರಿ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಶಿವಮೊಗ್ಗ ಸಹಯೋಗದಲ್ಲಿ ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಸದಸ್ಯರುಗಳಿಗೆ ಸದಸ್ಯತ್ವದ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೆಡ್ ಕ್ರಾಸ್ ವತಿಯಿಂದ ನಿರಂತರವಾಗಿ ಆರೋಗ್ಯ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಉಪಯುಕ್ತ ಅರಿವು ಕಾರ್ಯಾಗಾರಗಳನ್ನು ಸಹ ನಡೆಸಲಾಗುತ್ತಿದೆ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ರಾಮಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಹಿಳೆಯರು ಮನೆಯ ಜವಬ್ದಾರಿಯಲ್ಲಿ ತೊಡಗಿಸಿಕೊಂಡು ಅವರ ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಯನ್ನು ಗಮನಿಸದೆ ಬದುಕಿನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದ್ದರಿಂದ ಸದಸ್ಯರ ಶ್ರೇಯೋಭಿವೃದ್ದಿಗಾಗಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ. ಮಹಿಳೆಯರು ಆರೋಗ್ಯವಾಗಿದ್ದಲ್ಲಿ ತಮ್ಮ ಮನೆಯ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಸಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ರೆಡ್ ಕ್ರಾಸ್ ವತಿಯಿಂದ ಉಚಿತ ಕ್ಯಾನ್ಸರ್ ಅರಿವು ಮೂಡಿಸುವ ಮತ್ತು ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಸೌಂದರ್ಯ ಮತ್ತು ಚರ್ಮರೋಗ ತಜ್ಞರಿಂದ ಉಚಿತ ತಪಾಸಣೆಯನ್ನು ನಡೆಸಲಾಯಿತು.
ರೆಡ್ ಕ್ರಾಸ್ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಲಾಯಿತು. ಚಂದ್ರಗಿರಿ ಆಸ್ಪತ್ರೆಯ ಡಾ.ಜಯಚಂದ್ರ, ಮತ್ತು ಸ್ತ್ರೀ ರೋಗ ತಜ್ಞೆ ಡಾ. ಮಾಧುರ್ಯಾ ಅವರು ಮಹಿಳೆಯರು ಕ್ಯಾನ್ಸರ್ ಬರದಂತೆ ತಡಗಟ್ಟಲು ಮುನ್ನೆಚರಿಗೆ ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ದೇವೆಂದ್ರ, ವಿನೋದ್, ಕೆ.ಸಿ.ಬಸವರಾಜ್, ಶಾರದಾ, ರೇಖಾ ರಂಗನಾಥ್, ಭಾರತೀಯ ರೆಡ್ ಕ್ರಾಸ್ ಘಟಕದ ನಿರ್ದೇಶಕರು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.