ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ
ಡಾ.ಆರ್ ಸೆಲ್ವಮಣಿಯವರು ಶಿಕಾರಿಪುರ ತಾಲ್ಲೂಕಿನ ತಾಳಗುಂದ ಹೋಬಳಿಯ ಮಳೂರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಿದರು.
ಜಿಲ್ಲಾಧಿಕಾರಿಗಳು ಮೊದಲಿಗೆ ಮಳೂರು ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ತೆರಳಿ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ, ಇತರೆ ವ್ಯವಸ್ಥೆಯನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಮಳೂರಿನ ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದರು. ತದನಂತರ ಮಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಅಕ್ಷರ ದಾಸೋಹ ಆಹಾರ ಕೊಠಡಿ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿ, ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಧ್ಯಾಹ್ನ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಚರ್ಚೆ ನಡೆಸಿದರು.
ನಂತರ ಗ್ರಾಮದ ಮಾರಿಕಾಂಬ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕಂದಾಯ ಮತ್ತು ಇತರೆ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮಸ್ಥರಿಂದ ಕುಂದುಕೊರತೆಗಳನ್ನು ಆಲಿಸಿ ಅರ್ಜಿಗಳನ್ನು ಸ್ವೀಕರಿಸಿದರು.
ಎಸ್‍ಸಿ/ಎಸ್‍ಟಿ ಕಾಲೋನಿಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚಿಸಿದರು. ನಂತರ ತೊಗರ್ಸಿಯ ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ, ಪ್ರಭಾರ ಐಎಎಸ್ ಅಧಿಕಾರಿ ದಲ್ಜೀತ್ ಸಿಂಗ್, ತಹಶೀಲ್ದಾರ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.