ನಷ್ಟದಲ್ಲಿದ್ದ ಬ್ಯಾಂಕನ್ನು ಪ್ರಗತಿಯತ್ತ ಕೊಂಡೊಯ್ಯಬೇಕು. ಸರ್ಕಾರದಿಂದ ಮಂಜೂರಾದ 1.5 ಕೋಟಿ ಹಣವನ್ನು ರೈತರಿಗೆ ಶೇ.3ರ ದರದಲ್ಲಿ ಸಾಲ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ವಿರುದ್ಧ ಮಾಜಿ ಅಧ್ಯಕ್ಷ ಪಿ. ಎನ್. ಸುಬ್ರಾವ್ ಷಡ್ಯಂತರ ರೂಪಿಸಿ ಬ್ಯಾಂಕಿಗೆ ನಷ್ಟ ಉಂಟು ಮಾಡಿದ್ದಲ್ಲದೆ, ರೈತರಿಗೆ ಸಕಾಲಕ್ಕೆ ಸಾಲ ಸಿಗದಂತೆ ಮಾಡಿದ್ದಾರೆ ಎಂದು ಸಾಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಂ.ಕೆ. ದ್ಯಾವಪ್ಪ ಅವರು ಹೇಳಿದರು.
ಸಾಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬ್ಯಾಂಕಿಗೆ ಅಧ್ಯಕ್ಷರಾಗಿದ್ದರು. ಆದರೆ ಈ ಹಿಂದೆ ಸತತ ಮೂರು ಬಾರಿ ರಾಜ್ಯ ಬ್ಯಾಂಕಿನಿಂದ ರೈತರ ಕೃಷಿ ಅಭಿವೃದ್ಧಿಗೆ ಮಂಜೂರಾದ ಹಣವನ್ನ ರೈತರಿಗೆ ಸಾಲವಾಗಿ ನೀಡದೆ, ರಾಜ್ಯ ಬ್ಯಾಂಕಿಗೆ ವಾಪಸ್ ಕಳುಹಿಸಿ, ರೈತರಿಗೆ ಅನ್ಯಾಯ ಮಾಡಿರುವುದಲ್ಲದೆ ಬ್ಯಾಂಕಿಗೂ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಬ್ಯಾಂಕಿನಿಂದ ಈ ಸಾಲಿನಲ್ಲಿ 1.50 ಕೋಟಿ ರೂಪಾಯಿ ನಮ್ಮ ಬ್ಯಾಂಕಿಗೆ ಬಂದಿದೆ. ಈ ಬಾರಿ ರಾಜ್ಯ ಬ್ಯಾಂಕಿನವರು ರೈತರಿಗೆ ಸಾಲ ನೀಡಲು ರಾಜ್ಯ ಬ್ಯಾಂಕಿನಿಂದ ನಿಯೋಜಿಸಲ್ಪಟ್ಟ ವ್ಯವಸ್ಥಾಪಕರುಗಳು ನಮ್ಮ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಮಾತ್ರ ಎಲ್ಲಾ ವ್ಯವಸ್ಥಾಪಕರಿಗೆ ರೈತರ ಸಾಲದ ಅರ್ಜಿಗಳನ್ನ ಕಳುಹಿಸಬೇಕೆಂದು ಶರತ್ತು ವಿಧಿಸಿ, ರೈತರಿಗೆ ಸಾಲ ನೀಡಲು ದಿನಾಂಕ ನಗದಿಗೊಳಿಸಿ ರೂ.1.5 ಕೋಟಿ ರೂಪಾಯಿ ಮಂಜೂರು ಮಾಡಿರುತ್ತಾರೆ. ಈ ವಿಚಾರದ ಬಗ್ಗೆ ನವೆಂಬರ್ 7ರಂದು ಆಡಳಿತ ಮಂಡಳಿ ಸಭೆ ಕರೆದು ತಿಳಿಸಿದ್ದೇನೆ. ಈ ಸಂದರ್ಭದಲ್ಲಿ ಕೆಲವು ನಿರ್ದೇಶಕರು ಈ ಶರತ್ತಿನ ಅನ್ವಯ ರಾಜ್ಯ ಅಧ್ಯಕ್ಷರಲ್ಲಿ ಕೇಳಿಕೊಳ್ಳುವುದು ಸೂಕ್ತ ಎಂದು ತಿಳಿಸಿದರು. ಆದರೆ, ಸುಬ್ರಾವ್ ಅವರು ಇನ್ನು ಸ್ವಲ್ಪ ದಿನ ಕಾದು ನೋಡೋಣ ಎಂದರು ಎಂದು ವಿವರಿಸಿದರು.