ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದ್ದು, ಇದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದು ಲೋಕಾಯುಕ್ತ ಪೋಲೀಸರ ಅಸಮರ್ಥತಯನ್ನು ತೋರಿಸುತ್ತಿದೆ ಎಂದು ಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರು ಹೇಳಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಪರಿಣಾಮಕಾರಿ ತನಿಖೆ ನಡೆಸುವ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಿಸಿ ಕಾಯ್ದೆಯಡಿ ಪ್ರಕರಣಗಳ ತನಿಖೆ ನಡೆಯುವ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಿದ ಬಳಿಕ ಜನರ ನಿರೀಕ್ಷೆಗಳು ಹೆಚ್ಚಾಗಿದೆ. ಈ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಭ್ರಷ್ಟಾಚಾರ ನಿಗ್ರಹ ದಳದ ಎಲ್ಲ ಸಿಬ್ಬಂದಿಯ ಕರ್ತವ್ಯ ಎಂದು ಹೇಳಿದ್ದಾರೆ.
ಲೋಕಾಯುಕ್ತ ಪೊಲೀಸರು ತನಿಖೆಗಳನ್ನು ಉತ್ಸಾಹದಿಂದ ನಡೆಯಬೇಕು. ನೀವು (ಪೊಲೀಸ್ ಅಧಿಕಾರಿಗಳು)ಈ ಹಿಂದೆ ಹೇಗೆ ಕೆಲಸ ಮಾಡಿದ್ದೀರಿ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಆದರೀಗ ನೀವು ನಿಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು. ಜನಪ್ರತಿನಿಧಿಗಳಿಂದ ಯಾವುದೇ ಒತ್ತಡಗಳಿಲ್ಲ.
ಆದರೆ, ಸಂಸ್ಥೆಗಳ ಗುರಿಗಳಿಗೆ ವಿರುದ್ಧವಾಗಿ ಯಾರಾದರೂ ಕೆಲಸ ಮಾಡುತ್ತಿರುವುದು ಕಂಡುಬಂದಿದ್ದೇ ಆದರೆ, ಅವರ ಸಂಸ್ಥೆಯಲ್ಲಿ ಒಂದು ನಿಮಿಷ ಕೂಡ ಕೆಲಸ ಮಾಡಲು ಸಾಧ್ಯವಿಲ್ಲ. ಸಿಬ್ಬಂದಿಯ ಕಾರ್ಯಕ್ಷಮತೆಯ ಬಗ್ಗೆ ನಾನು ವರದಿಗಳನ್ನು ಪಡೆಯುವಲ್ಲಿ ಆಂತರಿಕ ಕಾರ್ಯವಿಧಾನವಿದೆ ಎಂದು ತಿಳಿಸಿದ್ದಾರೆ.
ಸಿಬ್ಬಂದಿಯಿಂದ ಯಾವುದೇ ಅಕ್ರಮ ನಡೆದರೆ ಸಂಸ್ಥೆ ನಗೆಪಾಟಲಿಗೀಡಾಗುತ್ತದೆ. “ನಾವು ಹಲವಾರು ಕಾರ್ಯಾಚರಣೆಗಳನ್ನು ಮಾಡುತ್ತಿರುತ್ತೇವೆ.
ಯಾವುದೇ ಅಧಿಕಾರಿ ಮಾಹಿತಿ ರವಾನಿಸಿರುವುದು ಕಂಡು ಬಂದಿದ್ದೇ ಆದರೆ, ಉಳಿದೆಲ್ಲ ತನಿಖೆಯನ್ನು ಬದಿಗಿಟ್ಟು, ಮೊದಲು ಯಾರು ಮಾಹಿತಿ ಸೋರಿಕೆ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಮತ್ತು ಕೃಷಿ ಕೇಂದ್ರಗಳಿಗೆ ಅಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಇದಲ್ಲದೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವು ಶೇಕಡಾ 85-90 ಆಗಿರಬೇಕು ಎಂದು ಹೇಳಿದರು.