ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆಯಾಗಿದೆ. ಜನರಲ್ಲಿಯೂ ಮಹಾಮಾರಿ ಸೋಂಕು ಕುರಿತ ಆತಂಕ ದೂರಾಗಿದೆ. ಈ ನಡುವಲ್ಲೇ ಕೈಗೆಟುಕುವ ವೆಚ್ಚದಲ್ಲಿ ಆರೋಗ್ಯ ಸೌಲಭ್ಯಗಳು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆಯಾಗಿದ್ದು, ಜನರಲ್ಲಿಯೂ ಮಹಾಮಾರಿ ಸೋಂಕು ಕುರಿತ ಆತಂಕ ದೂರಾಗಿದೆ. ಈ ನಡುವಲ್ಲೇ ಕೈಗೆಟುಕುವ ವೆಚ್ಚದಲ್ಲಿ ಆರೋಗ್ಯ ಸೌಲಭ್ಯಗಳು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.
ನಗರದ ಕೆಸಿ ಜನರಲ್, ಜಯನಗರ ಜನರಲ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಪ್ರತೀದಿನ ಸರಾಸರಿ 1,200 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯ 2022 ಅಂಕಿಅಂಶಗಳಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ. ಏಪ್ರಿಲ್ ತಿಂಗಳಿನಲ್ಲಿ 1,399 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರೆ, ಜುಲೈನಲ್ಲಿ 1,569, ಸೆಪ್ಟೆಂಬರ್ನಲ್ಲಿ 1,877 ದಾಖಲಾತಿಗಳಾಗಿರುವುದು ಕಂಡು ಬಂದಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಹಬ್ಬಗಳಿದ್ದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ ಸೆಪ್ಟೆಂಬರ್’ಗೆ ಹೋಲಿಕೆ ಮಾಡಿದರೆ, ಈ ಎರಡು ತಿಂಗಳಿನಲ್ಲಿ ಕಡಿಮೆ ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಸುಧಾರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಕೆಸಿ ಜನರಲ್ನಲ್ಲಿ, ಎಲ್ಲಾ ಹಾಸಿಗೆಗಳು ಆಮ್ಲಜನಕ ಸೌಲಭ್ಯವನ್ನು ಹೊಂದಿದೆ ಮತ್ತು ಐಸಿಯು ಹಾಸಿಗೆಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಣದುಬ್ಬರ ಹೆಚ್ಚಾಗುತ್ತಿದ್ದು, ಜನರು ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯವನ್ನು ಬಯಸುತ್ತಾರೆ. ಕೋವಿಡ್ ಸೋಂಕು ಕಡಿಮೆಯಾದ ಬಳಿಕ ಆಸ್ಪತ್ರೆಗಳು ಕೋವಿಡ್ ಹಾಸಿಗೆಗಳನ್ನು ಸಾಮಾನ್ಯ ವಾರ್ಡ್ಗಳಿಗೆ ನೀಡಲು ಆರಂಭಿಸಿವೆ ಎಂದು ಹೇಳಿದ್ದಾರೆ.
ರಾಜ್ಯದ ಆರೋಗ್ಯದ ಆರೈಕೆ ಉತ್ತಮವಾಗಿದೆ. ಆದರೆ, ಮಾನವ ಸಂಪನ್ಮೂಲದ ವಿಷಯದಲ್ಲಿ ಸರ್ಕಾರಿ ಆಸ್ಪತ್ರೆಗಳು ಹಿಂದುಳಿದಿವೆ ಎಂದು ಕೆಲವು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಸಿಬ್ಬಂದಿಗಳ ಸಂಖ್ಯೆ ಮಾತ್ರ ಒಂದೇ ಆಗಿದ್ದು, ಕೋವಿಡ್ ನಂತರ ಕೆಲಸದ ಹೊರೆ ಹೆಚ್ಚಾಗಿದೆ ಎಂದು ಕೆಲವು ಆಸ್ಪತ್ರೆಗಳಲ್ಲಿನ ನರ್ಸ್ ಗಳು ಮತ್ತು ಇತರ ಸಿಬ್ಬಂದಿಗಳು ಹೇಳಿದ್ದಾರೆ.