ಪರಿಸರ ಅಧ್ಯಯನ ಕೇಂದ್ರ, ಕ್ಯಾಟ್ಸ್ ಚಿತ್ರದುರ್ಗ, ಮೈಸೂರು ಹಾಗೂ ರೇಡಿಯೋ ಶಿವಮೊಗ್ಗದ ಸಹಯೋಗದೊಂದಿಗೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಾನುಲಿಯಲ್ಲಿ ನಡೆದ ಆ್ಯಕ್ಟಿಂಗ್ ಔಟ್ ಸರ್ಟಿಫಿಕೇಷನ್ ಕೋರ್ಸ್ ನ ಮೊದಲ ಬ್ಯಾಚ್ ನ ಸಂಪರ್ಕ ತರಗತಿಗಳು ಹಾಗೂ ಪರೀಕ್ಷೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಗದ್ದೆಯ ಪರಿಸರ ಅಧ್ಯಯನ ಕೇಂದ್ರದಲ್ಲಿ ನಡೆದ ಆ್ಯಕ್ಟಿಂಗ್ ಔಟ್ ಸರ್ಟಿಫಿಕೇಷನ್ ಕೋರ್ಸ್ ನ ಮೊದಲ ಬ್ಯಾಚ್ ನ ವಸತಿ ಸಹಿತ ಸಂಪರ್ಕ ತರಗತಿ, ಪರೀಕ್ಷೆಯಲ್ಲಿ ಕಲಿಕಾರ್ಥಿಗಳು ಭಾಗವಹಿಸಿದ್ದರು.
20 ಅವಧಿಯ ಬಾನುಲಿ ತರಗತಿಗಳ ಮುಖಾಂತರ ನಡೆದಿದ್ದ ಆ್ಯಕ್ಟಿಂಗ್ ಔಟ್ ಸರ್ಟಿಫಿಕೇಷನ್ ಕೋರ್ಸ್ನ ಬೌದ್ಧಿಕ ಹಾಗೂ ಪ್ರಾಯೋಗಿಕ ತರಗತಿಗಳನ್ನು ನಡೆಸಲಾಗಿತ್ತು. ಇದರ ಭಾಗವಾಗಿ ಈ ಸಂಪರ್ಕ ತರಗತಿಗಳು ನಡೆದವು.
ಸುಂದರ ಪರಿಸರದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಈ ಸಂಪರ್ಕ ತರಗತಿಗಳು ಜರುಗಿದವು. ಮೂರು ದಿನಗಳ ಕಾಲ ನಡೆದ ಈ ಸಂಪರ್ಕ ತರಗತಿಗಳಲ್ಲಿ ಕಲಿಕಾರ್ಥಿಗಳಲ್ಲಿದ್ದ ಗೊಂದಲಗಳನ್ನು ಬಗೆಹರಿಸಲಾಯಿತು.
ಪ್ರಾಯೋಗಿಕ ತರಗತಿಗಳ ಮುಖಾಂತರ ಕಲಿಕಾರ್ಥಿಗಳನ್ನು ಮಾನಸಿಕವಾಗಿ, ದೈಹಿಕವಾಗಿ ಸಿದ್ಧಗೊಳಿಸಲಾಯಿತು. ಪ್ರತಿದಿನ ಬೆಳಗ್ಗೆ 9:30ಕ್ಕೆ ತರಗತಿಗಳು ಆರಂಭವಾಗಿ ಅಗತ್ಯ ವಿರಾಮಗಳೊಂದಿಗೆ ರಾತ್ರಿ 9 ಗಂಟೆಯವರೆಗೂ ನಡೆದವು. ಇದರ ಜೊತೆಗೆ ಇದು ವಸತಿಸಹಿತ ಸಂಪರ್ಕ ತರಗತಿಯಾಗಿದ್ದರಿಂದ, ತಡರಾತ್ರಿಯವರೆಗೂ ಕಲಿಕಾರ್ಥಿಗಳ ನಡುವೆ, ಕಲಿಕಾರ್ಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ನಡುವೆ ಅನೌಪಚಾರಿಕ ಚರ್ಚೆ, ಸಂವಾದಗಳು ನಡೆಯುತ್ತಿದ್ದವು.
ಹೀಗಾಗಿ ಸಂಪರ್ಕ ತರಗತಿಗಳು ಮತ್ತಷ್ಟು ಕಳೆಗಟ್ಟಿದವು. ಪರೀಕ್ಷೆಗಳು ಕೂಡಾ ಬೌದ್ಧಿಕ ಹಾಗೂ ಪ್ರಾಯೋಗಿಕ ಈ ಎರಡೂ ವಿಭಾಗದಲ್ಲಿ ನಡೆದವು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾದ ಮೈಸೂರಿನ ಖ್ಯಾತ ರಂಗಕರ್ಮಿ ನಾ. ಶ್ರೀನಿವಾಸ್ ತರಗತಿಗಳನ್ನು ನಡೆಸಿಕೊಟ್ಟರು. ಸಹ ಸಂಪನ್ಮೂಲ ವ್ಯಕ್ತಿ, ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕರೂ ಆದ ಜಿ.ಎಲ್. ಜನಾರ್ದನ್ ಸಹಕರಿಸಿದರು. ಪರಿಸರ ಅಧ್ಯಯನ ಕೇಂದ್ರದ ಪ್ರಮುಖರೂ, ವಿಶ್ರಾಂತ ತಹಸೀಲ್ದಾರ್ ಚಂದ್ರಶೇಖರ್, ಯಶೋದಾ ಚಂದ್ರಶೇಖರ್ ಹಾಗೂ ಬಾನುಲಿಯ ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ ಭಾಗವಹಿಸಿದ್ದರು.