ಜಗತ್ತಿನ ಜ್ಞಾನ ವಾಹಿನಿಗಳಾದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳನ್ನು ಕನ್ನಡದಲ್ಲಿ ಪ್ರಸಾರ ಮಾಡುವಂತೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.
ಜಗತ್ತಿನ ಜ್ಞಾನ ವಾಹಿನಿಗಳಾದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ತಮಿಳಿನಲ್ಲಿ, ತೆಲುಗಿನಲ್ಲಿ, ಹಿಂದಿಯಲ್ಲಿ ಡಬ್ಬಿಂಗ್ ಆಗಿ ಅಂದಿನಿಂದ ಪ್ರಸಾರವಾಗುತ್ತಿದ್ದು, ಭೂ ಜೀವ ಜಗತ್ತಿನ ಅದ್ಭುತ ಸುಂದರ ವಿಷಯಗಳೆಲ್ಲಾ ಅಲ್ಲಿನ ಜನಗಳಿಗೆ ಅವರ ಅವರ ಪ್ರಾದೇಶಿಕ ಭಾಷೆಗಳಲ್ಲಿ ದೊರಕುತ್ತಿವೆ.
ಈ ಭೂಮಿಯ ಮೇಲಿನ ಜೀವಜಗತ್ತಿನ ಅದ್ಭುತ ವೈವಿಧ್ಯತೆಗಳನ್ನು ವೈಚಿತ್ರಗಳನ್ನು ಅವುಗಳ ನಿಗೂಢ ಜೀವನ ಕ್ರಮಗಳನ್ನು ಹಾಗೂ ಅವುಗಳೆಲ್ಲಾ ಅಳಿವಿನಂಚೆಗೆ ಹೋಗುತ್ತಿರುವ ಭೀಕರತೆಗಳನ್ನೆಲ್ಲ ಜಗತ್ತಿನ ಎಲ್ಲ ಜನಗಳು ಅವರವರ ಮಾತೃಭಾಷೆಗಳಲ್ಲಿ ಅರಿತುಕೊಳ್ಳುವ ಅನಿವಾರ್ಯತೆ ಇದೆ. ಆದರೆ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ಕನ್ನಡ ಭಾಷೆಯಲ್ಲಿ ಪ್ರಸಾರವಾಗದೇ ಇರುವುದರಿಂದ ಅದರಲ್ಲಿ ಜೀವ ವೈವಿಧ್ಯದ ಜ್ಞಾನ ಕನ್ನಡಿಗರನ್ನು ತಲುಪುತ್ತಿಲ್ಲ. ಆದ್ದರಿಂದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ಕನ್ನಡದಲ್ಲಿ ಪ್ರಸಾರವಾಗಬೇಕೆಂದು ಕನ್ನಡಿಗರು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸುನಿಲ್ ಕುಮಾರ್ ಅವರು ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.