ಸೇವಾ ನ್ಯೂನತೆ ಎಸಗಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡಸಹಿತ ಮರುಪಾವತಿಗೆ ಆದೇಶಿಸಿದೆ.
ಶಿವಮೊಗ್ಗದ ನಿವಾಸಿ ಲತಾ ರಮೇಶ್ ಮತ್ತು ಮಕ್ಕಳು ಇವರು 1ನೇ ಎದುರುದಾರರಾದ ಪ್ರಧಾನ ವ್ಯವಸ್ಥಾಪಕರು, ಮುಖ್ಯ ಶಾಖೆ, ಶಿವಮೊಗ್ಗ ಹಾಗೂ 2ನೇ ಎದುರುದಾರರಾದ ಮ್ಯಾನೇಜರ್ ಹೊಸ ಯಲ್ಲಾಪುರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಧಾರವಾಡ ಇವರ ವಿರುದ್ದ ದೂರು ಸಲ್ಲಿಸಿದ್ದರು.
ಲತಾ ರಮೇಶ್ ಇವರ ಪತಿ ದಿವಂಗತ ರಮೇಶ್ ಎಕ್ಸ್ ಸರ್ವಿಸ್‍ಮೆನ್ ಆಗಿದ್ದು ವಾಸದ ಮನೆ ನಿರ್ಮಾಣಕ್ಕೆ ಶಿವಮೊಗ್ಗದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ರೂ.17,60,000/- ಸಾಲ ಪಡೆದಿದ್ದು, ಸಾಲ ಮರುಪಾವತಿಗೆ ವಿಮಾ ಸೌಲಭ್ಯಕ್ಕಾಗಿ ರೂ.80,000/- ಗಳ ಹೆಚ್ಚುವರಿ ಸಾಲ ಸಹ ಪಡೆದು ಅಧಿಕೃತಗೊಳಿಸುವಲ್ಲಿ ವಿಫಲರಾಗಿರುತ್ತಾರೆ. ಹಾಗೂ ಸಾಲದ ಮೊತ್ತವನ್ನು ದಿವಂಗತ ರಮೇಶ್‍ರವರ ಧಾರವಾಡದ ಶಾಖೆಯಿಂದ ಶಿವಮೊಗ್ಗದ ಸಾಲದ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿದ್ದು, ಈ ಹಿಂದೆ ಶಿವಮೊಗ್ಗ ಗ್ರಾಹಕ ಆಯೋಗದ ಪ್ರಕರಣ ಸಂಖ್ಯೆ 84/2020 ರಲ್ಲಿ ಎದುರುದಾರ ಬ್ಯಾಂಕ್ ವಿರುದ್ದ ಸೇವಾ ನ್ಯೂನತೆ ಸರಿಪಡಿಸಲು ದಂಡ ಸಹಿತವಾಗಿ ಆದೇಶ ಆಗಿರುತ್ತದೆ.
ಆದಾಗ್ಯೂ ಸಹ ಸದರಿ ಬ್ಯಾಂಕಿನವರ ಮತ್ತೆ ವಿವಿಧ ದಿನಾಂಕಗಳಲ್ಲಿ ಒಟ್ಟು ರೂ.1,73,000/- ಗಳನ್ನು ಧಾರವಾಡ ಶಾಖೆಯ ಮೃತ ರಮೇಶ್‍ರವರ ಖಾತೆಯಿಂದ ಶಿವಮೊಗ್ಗದ ಬ್ಯಾಂಕಿನ ಸಾಲದ ಖಾತೆಗೆ ಮೃತರ ವಾರಸುದಾರರ ಗಮನಕ್ಕೆ ತಾರದೇ ಮತ್ತು ಒಪ್ಪಿಗೆ ಪಡೆಯದೇ ಬ್ಯಾಂಕಿನ ನಿಯಮಾವಳಿಗೆ ವಿರುದ್ದವಾಗಿ, ಅನಧಿಕೃತವಾಗಿ ವರ್ಗಾಯಿಸಿರುತ್ತಾರೆ.
ಈ ಹಿನ್ನೆಯಲ್ಲಿ ಸದರಿ ದೂರನ್ನು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರಡಿ ಪರಿಶೀಲಿಸಿದ ಆಯೋಗವು ಬ್ಯಾಂಕ್ ಸೇವಾ ನ್ಯೂನತೆ ದೃಢಪಟ್ಟಿರುವುದು ಕಂಡು ಬಂದಿದ್ದರಿಂದ ಬ್ಯಾಂಕ್ ಕಾನೂನುಬಾಹಿರವಾಗಿ ವರ್ಗಾಯಿಸಿದ ಮೊತ್ತ ರೂ.1,73,000/- ಗಳನ್ನು ಶೇ.8 ಬಡ್ಡಿಸಹಿತ ಮೃತ ರಮೇಶ್‍ರ ಧಾರವಾಡದ ಉಳಿತಾಯ ಖಾತೆಗೆ ಮರುಪಾವತಿಸಲು ಆದೇಶಿಸಿದೆ.
ಹಾಗೂ ದೂರದಾರರಿಗೆ ಉಂಟಾದ ಮಾನಸಿಕ ಹಿಂಸೆ ಮತ್ತು ತೊಂದರೆಗಳಿಗೆ ರೂ.1,00,000/- ಗಳ ಪರಿಹಾರ ಹಾಗೂ ವ್ಯಾಜ್ಯ ವೆಚ್ಚ ರೂ.5000/- ಗಳನ್ನು ಬ್ಯಾಂಕಿನವರು ದೂರುದಾರರಿಗೆ ಪಾವತಿಸುವಂತೆ ಆದೇಶಿಸಿದೆ.
ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಬಿ.ಡಿ.ಯೋಗಾನಂದ ಹಾಗೂ ಮಹಿಳಾ ಸದಸ್ಯೆ ಸವಿತಾ ಬಿ ಪಟ್ಟಣಶೆಟ್ಟಿ ಇವರ ಪೀಠವು ಈ ಆದೇಶ ನೀಡಿದೆ.