ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಬೇಕು. ಸೋಲು ಗೆಲವು ಮುಖ್ಯವಲ್ಲ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ಹಾಗೂ ಮನೋಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಹೇಳಿದರು.
ಮರ್ಕಝ್ ಸಆದಃ ಫೌಂಡೇಷನ್ ವತಿಯಿಂದ ಡಿಸೆಂಬರ್ 1, 2 ಮತ್ತು 3ರಂದು ನಡೆಯಲಿರುವ ಮೇಘಲಿಯೋ – ಮಕ್ಕಳ ಹಬ್ಬದ ಪೋಸ್ಟರ್ ರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅತ್ಯಂತ ಮುಖ್ಯ. ಹಣ, ಆಸ್ತಿ ಯಾವುದು ಶಾಶ್ವತವಲ್ಲ. ನಾವು ಗಳಿಸಿರುವ ಜ್ಞಾನ ಹಾಗೂ ಕೌಶಲ್ಯ ಪ್ರಮುಖ ಆಗಿದೆ. ಪ್ರಪಂಚದಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆದವರು ಕೌಶಲ್ಯ ಹಾಗೂ ಜ್ಞಾನ ಹೊಂದಿದವರೇ ಆಗಿದ್ದಾರೆ ಎಂದು ತಿಳಿಸಿದರು.
ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜೀವನಹಾದಿಯೇ ನಮಗೆಲ್ಲರಿಗೂ ಸ್ಫೂರ್ತಿ. ಎಲ್ಲ ವಿದ್ಯಾರ್ಥಿಗಳು ಸಾಧಕರ ಜೀವನಚರಿತ್ರೆಯಿಂದ ಪ್ರೇರಣೆ ಪಡೆದು ಸಾಧಿಸಲು ಮುಂದಾಗಬೇಕು. ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಸೇವೆ ಮಾಡಬೇಕು. ಉನ್ನತ ಸ್ಥಾನ ತಲುಪಿ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಮರ್ಕಝ್ ಸಆದಃ ಫೌಂಡೇಷನ್ ಮುಖ್ಯಸ್ಥ ಅಬ್ದುಲ್ ಲತೀಫ್ ಸಅದಿ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಕೌಶಲ್ಯ ಕಲಿಸುವ ಜತೆಯಲ್ಲಿ ವೈವಿಧ್ಯಮಯ ಸ್ಪರ್ಧೆಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಮಕ್ಕಳಲ್ಲಿ ಜ್ಞಾನಸಾಮರ್ಥ್ಯ ವೃದ್ಧಿಸಲು ಹಾಗೂ ಕೌಶಲ್ಯ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ. ಎಲ್ಲ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಉತ್ತಮ ಮನೋಭಾವ ಹಾಗೂ ಕಲಿಕಾ ಕೌಶಲ್ಯ ಹೊಂದಬೇಕು ಎಂದು ತಿಳಿಸಿದರು.
ಮರ್ಕಝ್ ಸಆದಃ ಫೌಂಡೇಷನ್ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಸಅದಿ, ಶಾಕಿರ್ ಸಖಾಫಿ, ಸಾದತ್ ಶಿವಮೊಗ್ಗ, ಸೈಫುಲ್ಲಾ ಮದನಿ, ಅಕ್ಬರ್ ಶಿವಮೊಗ್ಗ, ಅಶ್ರಫ್ ಶಿವಮೊಗ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.