ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗದ ತಜ್ಞ ವೈದ್ಯರ ತಂಡವೊಂದು ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೇ ಮಹಾಪಧಮನಿಯ ಕವಾಟವನ್ನು ಯಶಸ್ವಿಯಾಗಿ ಬದಲಾಯಿಸಿದೆ.
ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ.ಟಾಮ್ ದೇವಾಸಿಯಾ, ಸಹಾಯಕ ಪ್ರಾಧ್ಯಾಪಕಿ ಡಾ.ಮೋನಿಕಾ ಜೆ ಮತ್ತು ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗುರುಪ್ರಸಾದ್ ರೈ ಅವರನ್ನೊಳಗೊಂಡ ತಂಡವು ಅಪರೂಪದ ಸಾಹಸ ನಡೆಸಿ ಯಶಸ್ವಿಯಾಗಿದೆ ಎಂದು ಕೆಎಂಸಿ ತಿಳಿಸಿದೆ.
ಟ್ರಾನ್ಸ್‌ಕ್ಯಾಥೆಟರ್ ಎರೋಟಿಕ್ ವಾಲ್ವ್ ಇಂಪ್ಲಾಂಟೇಷನ್ (ಟಿಎವಿಐ) ನಂತರ ಕೆಲವೇ ದಿನಗಳಲ್ಲಿ ರೋಗಿ ಗಳನ್ನು ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟದ ಬದಲಾವಣೆಯನ್ನು ದೇಶದ ಕೆಲವೇ ಹೃದ್ರೋಗ ತಜ್ಞರು ಮಾತ್ರ ಮಾಡುತ್ತಾರೆ.
ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ ‘ದಿ ಟೀಮ್ ತಾವಿ ‘ ಇದುವರೆಗೆ ಇಂತಹ ಅನೇಕ ಚಿಕಿತ್ಸಾ ವಿಧಾನವನ್ನು ಯಶಸ್ವಿಯಾಗಿ ನಡೆಸಿದೆ ಎಂದು ತಿಳಿಸಿದೆ.
76 ವರ್ಷ ವಯಸ್ಸಿನ ಪುರುಷ ರೋಗಿಯು ಒಂದು ತಿಂಗಳಿನಿಂದ ತೀವ್ರವಾದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇದರ ತೊಂದರೆ ಕ್ರಮೇಣ ಹೆಚ್ಚುತ್ತಿತ್ತು. ಅವರ 2ಡಿ ಎಕೋ ತೀವ್ರವಾದ ಕ್ಯಾಲ್ಸಿಫಿಕ್ ಮಹಾಪಧಮನಿಯ ಸ್ಟೆನೋಸಿಸ್ ಅನ್ನು ತೋರಿಸುತಿತ್ತು. ಇಂಥ ಸಂದರ್ಭದಲ್ಲಿ ಪರಿಧಮನಿಯ ಆಂಜಿಯೋಗ್ರಾಮ್ ಸಾಮಾನ್ಯವಾಗಿತ್ತು.
ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ರೋಗಿ ಹೆಚ್ಚಿನ ಅಪಾಯವನ್ನು ಹೊಂದಿದ್ದರಿಂದ ನಾವು ಈ ರೋಗಿಗೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ಬದಲಾವಣೆ ಮಾಡಿದೆವು. ಇದು ಕೆಎಂಸಿ ಕೋವಿಡ್ ಯುಗದಲ್ಲಿ ಮಾಡಿದ ಮೊದಲ ತಾವಿ ಚಿಕಿತ್ಸಾ ವಿಧಾನವಾಗಿತ್ತು. ಕೆಲವೇ ದಿನಗಳಲ್ಲಿ ರೋಗಿ ಆರೋಗ್ಯವಂತರಾಗಿ ನಗುನಗುತ್ತಾ ಮನೆಗೆ ಮರಳಿದರು ಎಂದು ತಜ್ಞರ ತಂಡ ತಿಳಿಸಿದೆ.
ಅದೇ ರೀತಿ 72 ವರ್ಷ ವಯಸ್ಸಿನ ಪುರುಷ ರೋಗಿ ತೀವ್ರವಾದ ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆ ಯಿಂದ ಬಳಲುತ್ತಿದ್ದು ಅವರಿಗೂ ತೆರೆದ ಹೃದಯ ಶಸ್ತ್ರಚಿಕಿತ್ಸೆ ಸಾಧ್ಯವಿರಲಿಲ್ಲ. ಹೀಗಾಗಿ ತಾವಿ ಚಿಕಿತ್ಸಾ ವಿಧಾನದ ಮೂಲಕ ಮಹಾಪಧಮನಿಯ ಕವಾಟವನ್ನು ಬದಲಿಸಲಾಯಿತು. ಕೆಲವೇ ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಮತ್ತೊಬ್ಬ 74 ವರ್ಷ ವಯಸ್ಸಿನ ಪುರುಷ ರೋಗಿ, ತೀವ್ರ ಹೃದಯ ವೈಫಲ್ಯ ಮತ್ತು ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದರು.
ಅವರ ಶ್ವಾಸಕೋಶದ ಕಾಯಿಲೆಯನ್ನು ಮೊದಲು ಗುಣಪಡಿಸಿ ಬಳಿಕ ಅವರಿಗೆ ಕವಾಟದ ಬದಲಾವಣೆ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ತಂಡ ತಿಳಿಸಿದೆ.