ಸ್ಕೈರೂಟ್ ಏರೋಸ್ಪೇಸ್ ಕಂಪನಿಯು ಅಭಿವೃದ್ಧಿಪಡಿಸಿರುವ ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-ಎಸ್’ ಮೂಲಕ ಮೂರು ಉಪಗ್ರಹಗಳನ್ನು ಶುಕ್ರವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಪಾಲ್ಗೊಳ್ಳುವಿಕೆಗೆ 2020ರಲ್ಲಿ ಅವಕಾಶ ನೀಡಿದ ನಂತರ, ನಡೆದ ಮೊದಲ ಕಾರ್ಯಾಚರಣೆ ಇದಾಗಿದೆ.
ಸ್ಕೈರೂಟ್ ಏರೋಸ್ಪೇಸ್ 2018ರಲ್ಲಿ ಸ್ಥಾಪನೆಯಾದ ನವೋದ್ಯಮ. ದೇಶದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಅಡಿಗಲ್ಲು ಹಾಕಿದ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರ ಗೌರವಾರ್ಥ ಈ ರಾಕೆಟ್‌ಗೆ ಕಂಪನಿಯು ‘ವಿಕ್ರಮ್-ಎಸ್’ ಎಂದು ಹೆಸರಿಟ್ಟಿದೆ.
ದೇಶೀಯವಾಗಿ ಖಾಸಗಿ ಕಂಪನಿಯೊಂದು ಅಭಿವೃದ್ಧಿಪಡಿಸಿದ ಕ್ರಯೋಜೆನಿಕ್ ಎಂಜಿನ್ ಮತ್ತು ಬೂಸ್ಟರ್ ರಾಕೆಟ್‌ಗಳನ್ನು ಹೊಂದಿರುವ ವಿಕ್ರಮ್-ಎಸ್, ಈ ಸರಣಿಯ ಮೊದಲ ರಾಕೆಟ್. ಇದು 490 ಕೆ.ಜಿ. ತೂಕದಷ್ಟು ಉಪಗ್ರಹಗಳನ್ನು ಗರಿಷ್ಠ 500 ಕಿ.ಮೀ. ಎತ್ತರದ ಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿದೆ. 510 ಕೆ.ಜಿ. ಭಾರ ಹೊರುವ ಸಾಮರ್ಥ್ಯವಿರುವ ವಿಕ್ರಮ್-2 ಮತ್ತು 815 ಕೆ.ಜಿ. ಭಾರ ಹೊರುವ ಸಾಮರ್ಥ್ಯದ ವಿಕ್ರಮ್-3 ರಾಕೆಟ್‌ಗಳನ್ನು ಸಹ ಸ್ಕೈರೂಟ್ ಅಭಿವೃದ್ಧಿಪಡಿಸಿದೆ.
ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆದ ಉಡ್ಡಯನ ಕಾರ್ಯಾಚರಣೆಯಲ್ಲಿ ಇಸ್ರೊ ಅಧ್ಯಕ್ಷ ಸೋಮನಾಥ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಕೇಂದ್ರದ (ಇನ್‌ಸ್ಪೇಸ್) ಅಧ್ಯಕ್ಷ ಪವನ್ ಗೋಯೆಂಕಾ ಇದ್ದರು.
ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾತ್ರವೇ ಈವರೆಗೆ ಉಡ್ಡಯನ ಕಾರ್ಯಾಚರಣೆಗಳನ್ನು ನಡೆಸುತ್ತಿತ್ತು. ಖಾಸಗಿ ಕಂಪನಿಗಳು ಸಹ ತಮ್ಮ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಇಸ್ರೊ ರಾಕೆಟ್‌ಗಳನ್ನು ಬಳಸಿ
ಕೊಳ್ಳಬೇಕಿತ್ತು. ಈಗ ಸ್ಕೈರೂಟ್‌ನಂತಹ ಖಾಸಗಿ ಕಂಪನಿಗಳಿಗೆ ಅಂತಹ ಸೇವೆ ನೀಡಲು ಅವಕಾಶ ದೊರೆತಿದೆ.
‘ಭಾರತದ ಖಾಸಗಿ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇದು ಐತಿಹಾಸಿಕ ಕ್ಷಣ ಮತ್ತು ಮಹತ್ವದ ಮೈಲುಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
