ರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ಸ್ಥಾಪನೆ ಮಾಡುತ್ತೇವೆ ಎಂಬ ನರಸಿಂಹರಾಜ ಶಾಸಕ ತನ್ವೀರ್ ಸೇಠ್ ಅವರ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕೆಂಡಾಮಂಡಲರಾಗಿದ್ದಾರೆ.
ರಾಜಕೀಯ ಕಾರಣಗಳಿಂದ ಧರ್ಮ ಬದಲಾಯಿಸಲು ಆಗಲ್ಲ. ರಾಜಕಾರಣ ಇವತ್ತು ಇರುತ್ತೆ ನಾಳೆ ಸಾಯುತ್ತದೆ. ನಮಗೆ ಧರ್ಮನೇ ಮುಖ್ಯ. ಟಿಪ್ಪು ಪ್ರತಿಮೆ ಸ್ಥಾಪನೆ ಪ್ರಶ್ನೆಯೇ ಇಲ್ಲ. ಪ್ರತಿಮೆಗೆ ನಮ್ಮಲ್ಲಿ ಅವಕಾಶವೇ ಇಲ್ಲ ಎಂದು ಇಬ್ರಾಹಿಂ ಸ್ಪಷ್ಟಪಡಿಸಿದರು.
ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಇರುವುದು ಬಡವರಿಗೆ ಸಹಾಯ ಮಾಡುವುದು. ಇದೇ ನಮ್ಮಲ್ಲಿರುವ ಆಚರಣೆ. ಎಲ್ಲಿಯಾದರೂ ಮುಸ್ಲಿಮರ ಪ್ರತಿಮೆ ಇರುವುದನ್ನು ತೋರಿಸಿ. ಈ ತನ್ವೀರ್ ಸೇಠ್‌ಗೆ ಏನೂ ಗೊತ್ತಿಲ್ಲ. ಅವರ ತಂದೆ ಅಜೀಜ್ ಸೇಠ್ 50 ವರ್ಷ ಕೆಲಸ ಮಾಡಿದ್ದಾರೆ. ಅವರ ಪ್ರತಿಮೆ ಎಲ್ಲಾದರೂ ಇದೆಯಾ ? ಏಕೆ ಹಾಕಿಲ್ಲ ಎಂದು ಪ್ರಶ್ನಿಸಿದ ಅವರು, ಟಿಪ್ಪು ಜಯಂತಿ ಮಾಡಿದ್ದೂ ತಪ್ಪು. ನಮ್ಮಲ್ಲಿ ಜಯಂತಿ ಅದು ಇದು ಇಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ಬದಲಾಗಿದೆ ಅಂತ ಧರ್ಮ ಬದಲಾಯಿಸಲು ಆಗುತ್ತಾ?
ಅಡ್ಡಂಡ ಕಾರ್ಯಪ್ಪ ಅವರು ರಚಿಸಿರುವ ಟಿಪ್ಪುವಿನ ನಿಜ ಕನಸುಗಳು ಕೃತಿಯ ವಿರುದ್ಧ ಒಂದೆರಡು ದಿನದಲ್ಲಿ ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಲಾಗುವುದು ಎಂದು ಸಿ.ಎಂ. ಇಬ್ರಾಹಿಂ ಅವರು ಹೇಳಿದರು.
ನಾಟಕಕ್ಕೆ ತಡೆ ಕೋರಿ ಮೈಸೂರಿನಲ್ಲಿ ಈಗಾಗಲೇ ನ್ಯಾಯಾಲಯದ ಮೊರೆ ಹೋಗಲಾಗಿದೆ. ನಾಳೆ ಅಥವಾ ನಾಳಿದ್ದು ಬೆಂಗಳೂರಿನಲ್ಲಿ ನ್ಯಾಯಾಲಯದ ಮೊರೆ ಹೊಗಲಾಗುವುದು ಎಂದು ಅವರು ತಿಳಿಸಿದರು.
ಮೈಸೂರು ಸಾಂಸ್ಕೃತಿಕ ನಗರಿ, ವಿದ್ಯಾನಗರಿ. ಸಂಸದ ಪ್ರತಾಪ್ ಸಿಂಹ ಅಜ್ಞಾನದ ಕಡೆ ಕರೆದುಕೊಂಡು ಹೋಗುತ್ತಿದ್ದಾರೆ. ಟಿಪ್ಪು ಪುಸ್ತಕ, ನಾಟಕ ಆಕ್ರೋಶಕ್ಕೆ ಕಾರಣವಾಗಿದೆ. ಗಲಾಟೆಗಳು ನಡೆಯಬಾರದು ಎಂದು ಸಭೆ ನಡೆಸಿದ್ದೇನೆ. ಪುಸ್ತಕದಲ್ಲಿ ಟಿಪ್ಪುವಿನ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ. ಶೃಂಗೇರಿ ಶಾರದ ಪೀಠವನ್ನು ಪುನರ್ ನಿರ್ಮಿಸಿರುವುದು ಟಿಪ್ಪು ಎಂದು ಗುರುಗಳೇ ಹೇಳಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದಂತೆ ಈ ರೀತಿ ಮಾಡುತ್ತಿದ್ದಾರೆ.