ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುಗ್ವೆ ಗ್ರಾಮದ ದಂಪತಿಗಳು ದಯಾ ಮರಣ ಕೋರಿ ಅರ್ಜಿ ಸಲ್ಲಿಸಿರುವ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಎನ್.ಡಿ. ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.
ಸಾಗರ ತಾಲೂಕಿನ ಖಂಡಿಕಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಗ್ವೆ ಗ್ರಾಮದ ಸರ್ವೆ ನಂಬರ್ 136/1 ರಲ್ಲಿ ತಮಗೆ ಸೇರಿದ ಭೂಪರಿವರ್ತನೆಯಾದ ಜಾಗದಲ್ಲಿ 61%ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡದೆ ಇರುವುದರಿಂದ ಶ್ರೀಕಾಂತ ನಾಯ್ಕ್ ಹಾಗೂ ಸುಜಾತಾ ನಾಯ್ಕ್ ಅವರು ದಯಾಮರಣ ಕೋರಿ ಸಾಗರ ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಖಂಡಿಕಾ ಗ್ರಾಮ ಪಂಚಾಯಿತಿಯಿಂದ ಸಂಬಂಧಿಸಿದ ಕಡತ ಹಾಗೂ ದಾಖಲೆಗಳನ್ನು ಪಡೆದು ಕೂಲಂಕುಷವಾಗಿ ಪರಿಶೀಲಿಸಲಾಗಿರುತ್ತದೆ ಎಂದರು.
ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯಿತಿಯಿಂದ ಕಾನೂನು ಸಲಹೆ ಪಡೆಯಲಾಗಿದೆ. ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳ ಅಂತಿಮ ಆದೇಶದವರೆಗೆ ಅಥವಾ ನಿವೇಶನಗಳ ಹಂಚಿಕೆ ಕರಾರು ಪತ್ರ ಸಲ್ಲಿಸುವವರೆಗೆ ನಿವೇಶನ ಮಾರಾಟಕ್ಕೆ ಬಿಡುಗಡೆ ಮಾಡಲು ಸಾಧ್ಯವಿರುವುದಿಲ್ಲವೆಂದು ವಕೀಲರು ಕಾನೂನು ಸಲಹೆಯನ್ನು ನೀಡಿರುತ್ತಾರೆ.
ಶ್ರೀಕಾಂತನಾಯ್ಕ ಹಾಗೂ ಮ್ಯಾನೇಜಿಂಗ್ ಪಾರ್ಟ್‍ನರ್ ಎಸ್.ಚಂದ್ರಶೇಖರ್ ನಡುವೆ ಅನೇಕ ನ್ಯಾಯಾಲಯಗಳಲ್ಲಿ ವಿವಿಧ ವ್ಯಾಜ್ಯಗಳು ಬಾಕಿ ಇದೆ. ಈ ಹಂತದಲ್ಲಿ ನಿವೇಶನಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗಿರುವುದಿಲ್ಲ ಎಂದು ಎನ್.ಡಿ. ಪ್ರಕಾಶ್ ತಿಳಿಸಿದ್ದಾರೆ.
ವಾಸ್ತವಾಂಶಗಳನ್ನು ಮರೆಮಾಚಿ ಮಾಲೀಕರಾದ ಶ್ರೀಕಾಂತ ನಾಯ್ಕ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್, ಸಾಗರ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ಮೇಲೆ ಅನಗತ್ಯ ಒತ್ತಡ ಹೇರುವ ಸಲುವಾಗಿ ಸುಳ್ಳು ಲಂಚದ ಆರೋಪ ಮಾಡಿರುತ್ತಾರೆ. ಇದು ಸತ್ಯಕ್ಕೆ ದೂರವಾಗಿರುತ್ತದೆ. ಆದ್ದರಿಂದ ಈ ಸುದ್ದಿ ಸತ್ಯಕ್ಕೆ ದೂರವಾಗಿರುತ್ತದೆ ಎಂದು ಅವರು ಸ್ಪಷ್ಟೀಕರಣ ನೀಡಿರುತ್ತಾರೆ.