ಅಮೆರಿಕ ಸಂಸತ್‌ಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಬೆಳಗಾವಿ ಮೂಲದ ಶ್ರೀ ಥಾಣೆದಾರ್ ಆಯ್ಕೆಯಾಗಿದ್ದಾರೆ.
ಡೆಮಾಕ್ರೆಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಥಾಣೆದಾರ್ 84096 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ, ರಿಪಬ್ಲಿಕನ್ ಪಕ್ಷದ ಮಾರ್ಟೆಲ್ ಬಿವಿಂಗ್ 27366 ಮತಗಳನ್ನು ಪಡೆದು ಸೋಲನ್ನಪ್ಪಿದರು.
ಮಿಚಿಗನ್ ಹೌಸ್‌ನ 3ನೇ ಜಿಲ್ಲೆಯಿಂದ ನಡೆದ ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ, ಮಿಚಿಗನ್ ರಾಜ್ಯದಿಂದ ಸಂಸತ್‌ಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ಹಿರಿಮೆ ಥಾಣೆದಾರ್ ಅವರ ಪಾಲಾಗಿದೆ.
ಹಾಲಿ ಅಮೆರಿಕ ಸಂಸತ್‌ನಲ್ಲಿ ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ , ರೋ ಖನ್ನಾ ಮತ್ತು ಪ್ರಮೀಳಾ ಜಯಪಾಲ್ ಸದಸ್ಯರಾಗಿದ್ದು, ಇದೀಗ ನಾಲ್ಕನೇ ವ್ಯಕ್ತಿಯ ಸೇರ್ಪಡೆಯಾಗಿದೆ.
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀ ಥಾಣೆದಾರ್, ಆರಂಭದಲ್ಲಿ ಕುಟುಂಬ ನಿರ್ವಹಣೆಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬಳಿಕ ಮುಂಬೈನಲ್ಲಿ ಭಾಭಾ ಪರಮಾಣು ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದರು.
ಬಳಿಕ 70ರ ದಶಕದಲ್ಲಿ ಅಮೆರಿಕದಲ್ಲಿ ಯಶಸ್ವಿ ಉದ್ಯಮಿಯಾಗುವ ಕನಸು ಹೊತ್ತು ಕೈಯಲ್ಲಿ ಕೇವಲ 20 ಡಾಲರ್ (ಈಗಿನ ಲೆಕ್ಕಾಚಾರದಲ್ಲಿ 1600 ರು.) ಇಟ್ಟುಕೊಂಡು ಅಮೆರಿಕಕ್ಕೆ ಬಂದಿದ್ದರು. ನಂತರದ 5 ದಶಕಗಳಲ್ಲಿ ನಾನಾ ಹಂತಗಳನ್ನು ಏರಿ ರಾಜಕೀಯ ಪ್ರವೇಶ ಮಾಡಿ ಇದೀಗ ಸಂಸದರಾಗಿ ಹೊರಹೊಮ್ಮಿದ್ದಾರೆ