ಕೋಲಾರ ಜಿಲ್ಲೆಯಲ್ಲಿ ಐದು ದಿನಗಳ ಕಾಲ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಮಾಡುತ್ತಿದ್ದು, ಕಳಪೆಯಾಗಿದ್ದರೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುತ್ತೇನೆ. ನನ್ನ ಈ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸ್ವಷ್ಟಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲೇ ಹೇಳಿದಂತೆ ಜಿಲ್ಲೆಯಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲು ಬಂದಿದ್ದೇನೆ. ಯಾರೊಂದಿಗೂ ರಾಜಿ ಪ್ರಶ್ನೆಯೇ ಇಲ್ಲ, ನನ್ನ ಧ್ವನಿಯೂ ಸಹಾ ಬದಲಾಗಿಲ್ಲ. ಏಕಾಏಕಿ ಬಂದು ಕೆಲಸ ಮಾಡುವುದಲ್ಲ. ಪ್ರತಿ ತಾಲೂಕಿನಲ್ಲಿ ಯಾವ ಕೆಲಸಗಳು ಹೇಗೆ ಆಗಿವೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಹಾಗಾಗಿ ಸೋಮವಾರದಂದು ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ಈಗಾಗಲೇ ಕಾಮಗಾರಿ ಪೂರ್ಣಗೊಂಡು, ಅಂತಿಮ ಬಿಲ್ ಪಾವತಿಯಾಗಿರುವುದು, ನಿರ್ವಹಣೆ ಅವಧಿ ಮುಗಿದಿರುವ ಕಾಮಗಾರಿಗಳನ್ನು ಪರಿಶೀಲನೆ ಮಾಡುವ ಅವಶ್ಯಕತೆಯಿಲ್ಲ. ನಿರ್ವಹಣೆ ಅವಧಿ ಪೂರ್ಣಗೊಳ್ಳದೆ ಇರುವಾಗ, ಕಳಪೆ ಕಂಡು ಬಂದರೆ ಪರಿಶೀಲನೆ ಮಾಡಲಾಗುವುದು. ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.