ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಕುರಿತಾದ ಸಂಸದೀಯ ಸಮಿತಿ ಶಿಫಾರಸು ಮಾಡಿರುವುದನ್ನು ಕರ್ನಾಟಕದ ಶಿಕ್ಷಣ ತಜ್ಞರು ಸ್ವಾಗತಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನ್ವಯ ಸಂಸದೀಯ ಸಮಿತಿ ಮಾಡಿರುವ ಈ ಶಿಫಾರಸು ಒಳ್ಳೆಯ ಬೆಳವಣಿಗೆ.
ಆದರೆ, ಇನ್ನಷ್ಟು ಸ್ಪಷ್ಟತೆ ಮೂಡಿಸಲು ಪ್ರಾದೇಶಿಕ ಭಾಷೆ ಜತೆಗೆ ಸ್ಥಳೀಯ ಭಾಷೆ ಹಾಗೂ ರಾಜ್ಯ ಭಾಷೆ ಪದಗಳ ಬಳಕೆ ಕುರಿತು ಹೆಚ್ಚು ನಿಖರವಾಗಿ ಹೇಳಬೇಕು.
ಆಗ ಸಮಿತಿ ಶಿಫಾರಸು ಮಾಡಿದಂತೆ ಅನುಷ್ಠಾನಕ್ಕೆ ತರಲು ಸಾಧ್ಯ. ಜತೆಗೆ ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಕನ್ನಡದ ಬೋಧನಾ ಕ್ರಮ ಸುಲಭ ಹಾಗೂ ಸುಲಲಿತವಾಗುತ್ತದೆ.
ಈ ಕಾರ್ಯವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ.
ಐಐಟಿಗಳಂತಹ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹಾಗೂ ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಹಿಂದಿ ಭಾಷೆಯನ್ನು, ಇನ್ನಿತರ ಪ್ರದೇಶಗಳಲ್ಲಿ ಸ್ಥಳೀಯ ಭಾಷೆಯನ್ನು ಬಳಸಬೇಕು.