ಕೊರೋನಾ ದ ಬಳಿಕ ಶಿವಮೊಗ್ಗದಲ್ಲಿ ಮೈಸೂರಿನ ರಾಜ್ಯಸವಾರಿಗೆ ಪ್ರತಿಬಿಂಬದಂತೆ ತೋರುವ ಜಂಬೂ ಸವಾರಿ ಹಾಗೂ ವಿಜಯದಶಮಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಶಿವಮೊಗ್ಗದ ಜಂಬೂ ಸವಾರಿಗೆ ಸಾವಿರಾರು ಭಕ್ತರು ನೆರೆದಿದ್ದರು. ಸುಮಾರು 750ಕೆಜಿ ಬೆಳ್ಳಿಯ ಅಂಬಾರಿಯನ್ನ ಹೊತ್ತು ಗಾಂಭೀರ್ಯದಿಂದ ಸಾಗರ ಎಂಬ ಆನೆ ಹೆಜ್ಜೆ ಹಾಕಿತು. ಇದರ ಜೊತೆಗೆ ಭಾನು ಹಾಗೂ ನೇತ್ರ ಎಂಬ ಆನೆಗಳು ಜಂಬುಸವಾರಿಯಲ್ಲಿ ಹೆಜ್ಜೆ ಹಾಕಿದವು.
ಅಂಬಾರಿಯ ಮೇಲೆ ವಿರಾಜಮಾನ ವಾಗಿದ್ದ ಚಾಮುಂಡೇಶ್ವರಿ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು. ಮೆರವಣಿಗೆಯಲ್ಲಿ ದೇವಿಯ ವಿಗ್ರಹಕ್ಕೆ ಭಕ್ತರು ಹೂಗಳನ್ನು ದೇವಿಗೆ ಅರ್ಪಿಸುತ್ತಿದ್ದರು.
ಶಿವಪ್ಪ ನಾಯಕ ಅರಮನೆ ಮತ್ತು ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ನಂದಿ ಕೋಲಿಗೆ ತಹಶೀಲ್ದಾರ್ ನಾಗರಾಜ್ ಅವರು ಪೂಜೆ ಸಲ್ಲಿಸಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಶಿವಮೊಗ್ಗದ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಅನೇಕ ದೇವರುಗಳ ಪಲ್ಲಕ್ಕಿಯನ್ನು ಹೊತ್ತ ಟ್ರ್ಯಾಕ್ಟರ್ ಗಳು ಸಾಗಿ ಬಂದವು. ಮೆರವಣಿಗೆಯಲ್ಲಿ ನಂದಿ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಹುಲಿ ವೇಷಧಾರಿಗಳು ಹೀಗೆ ನಾನಾ ಕಲಾತಂಡಗಳು ಮೆರವಣಿಗೆಗೆ ಮೆರೆಗನ್ನು ತಂದವು.
ಕೋಟಿ ಸೀತಾ ರಾಮಾಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಜಂಬೂ ಸವಾರಿ ಮೆರವಣಿಗೆಗೆ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ ಮಾರ್ಗವಾಗಿ ಹಳೆ ಜೈಲ್ ರಸ್ತೆಯ ಮೂಲಕ ಹಾಯ್ದು ಬಂದು ಫ್ರೀಡಂ ಪಾರ್ಕ್ ತಲುಪಿತು. ಅಲ್ಲಿಂದ ಚಾಮುಂಡೇಶ್ವರಿಯ ಮೂರ್ತಿಯನ್ನು ಬೆಳ್ಳಿ ಅಂಬಾರಿಯೊಂದಿಗೆ ಹೂವಿನಿಂದ ಸಿಂಗರಿಸಿದ ವಿಶೇಷ ವಾಹನದಲ್ಲಿ ಕೊಂಡೊಯ್ಯಲಾಯಿತು.
ಇದೇ ಸಂದರ್ಭದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಅಂತಾರಾಷ್ಟ್ರೀಯ ಜಾನಪದ ಕಲಾವಿದರಾದ ಡಾ. ಸುಬ್ಬನಹಳ್ಳಿ ರಾಜು ಹಾಗೂ ರಾಜಪ್ಪ ನಡೆಸಿಕೊಟ್ಟ ಜಾನಪದ ಸಂಭ್ರಮದಲ್ಲಿ ನೆರೆದಿದ್ದ ಜನರು ಹೆಜ್ಜೆ ಹಾಕಿದರು. ಈ ದೃಶ್ಯವನ್ನು ನೋಡಲು ಮನಮೋಹಕವಾಗಿತ್ತು.