ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಪ್ರಶ್ನಿಸಿ ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಮೂಲದ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್ ಬರೋಬ್ಬರಿ 5 ಲಕ್ಷ ರೂ. ದಂಡ ಹಾಕಿದೆ.
ಅರ್ಜಿದಾರರು ಸತ್ಯಾಂಶವನ್ನು ಬಚ್ಚಿಟ್ಟು, ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳುವ ಮಾಡಿದ್ದಲ್ಲದೆ, ನ್ಯಾಯಾಂಗದ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಇದನ್ನು ಸರ್ವತಃ ಸಹಿಸಲು ಸಾಧ್ಯವಿಲ್ಲ. ಇಂತಹ ಪ್ರಯತ್ನಗಳನ್ನು ನಿರ್ದಾಕ್ಷಿಣ್ಯವಾಗಿ ಮತ್ತು ಕಠೀಣಾತಿ ಕಠಿಣ ರೀತಿಯಲ್ಲಿ ಹತ್ತಿಕ್ಕಲಾಗುವುದು ಎಂದು ಹೈಕೋರ್ಟ್ ಹೇಳಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ನಿವಾಸಿ ಪಿ. ಮೋಹನ್ ಚಂದ್ರ ದಂಡ ಹಾಕಿಸಿಕೊಂಡ ವ್ಯಕ್ತಿ. ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೋಹನ್ ಚಂದ್ರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ. ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿದಾರರಿಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಅರ್ಜಿದಾರರು 5 ಲಕ್ಷ ರೂ. ದಂಡದ ಮೊತ್ತವನ್ನು 2 ತಿಂಗಳಲ್ಲಿ ಬೆಂಗಳೂರು ವಕೀಲರ ಸಂಘಕ್ಕೆ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಅರ್ಜಿದಾರರರು ಸ್ವಲ್ಪ ಸಮಯಾವಕಾಶ ಕೋರಿದರು. ಆದರೆ ವಿಭಾಗೀಯ ನ್ಯಾಯಪೀಠ ಆ ಮನವಿಯನ್ನೂ ಸಹ ತಿರಸ್ಕರಿಸಿದೆ.
ಅರ್ಜಿದಾರರು ಮೂಲತಃ ವಕೀಲರಾಗಿದ್ದರೂ ಪಾರ್ಟಿ ಇನ್ ಪರ್ಸನ್ ಎಂದು ಹೇಳಿಕೊಂಡು ಸಹ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಆ ಮೂಲಕ ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡಿದ್ದಾರೆ. ನ್ಯಾಯಾಲಯಗಳು ದೇವಾಲಯಗಳಿದ್ಧಂತೆ, ಜನರಿಗೆ ಇಂದಿಗೂ ನಂಬಿಕೆ ಉಳಿದಿರುವುದು ಕೋರ್ಟ್‌ಗಳಲ್ಲಿ ಮಾತ್ರ. ಎಲ್ಲ ಕಡೆ ಸೋತ ಜನರು ಕೊನೆಗೆ ನ್ಯಾಯ ಅರಸಿ ಬರುವುದು ಕೋರ್ಟ್‌ಗೆ, ಅಂತಹ ನ್ಯಾಯಾಂಗದಲ್ಲಿ ಬಿರುಕು ಮೂಡಲು ಬಿಡುವುದಿಲ್ಲ’. ಹಾಗೆ ಬಿಟ್ಟರೆ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸ ಕಳೆದುಹೋಗಲಿದೆ’ ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ನ್ಯಾಯಾಧೀಶರು ಇಂತಹ ಪ್ರಕರಣಗಳನ್ನು ನೋಡಿಕೊಂಡು ಸುಮ್ಮನೆ ಕೂರಲಾಗದು. ನ್ಯಾಯಾಂಗದ ವರ್ಚಸ್ಸಿಗೆ ಧಕ್ಕೆ ತರಲು ಯಾರಿಗೂ ಬಿಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಕ್ಷುಲ್ಲಕ ಅರ್ಜಿಗಳು ಹೆಚ್ಚುತ್ತಿವೆ. ಇಂತಹ ಪ್ರವೃತ್ತಿಯನ್ನು ಹತ್ತಿಕ್ಕಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.