ಮೈಸೂರು ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ‘ಮಂಗಳೂರು ದಸರಾ ದರ್ಶನ’ ಹೆಸರಿನಲ್ಲಿ ಸೆ.26ರಿಂದ ಅ.5ರ ವರೆಗೆ ಪ್ಯಾಕೇಜ್ ಪ್ರವಾಸ ಆಯೋಜಿಸಲಾಗಿದೆ.
ದಸರಾ ವೇಳೆ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳಿಗೆ ಧಾರ್ಮಿಕ ಪ್ರವಾಸ ಇದರ ಉದ್ದೇಶವಾಗಿದೆ.
ಸುಮಾರು 10 ವಿವಿಧ ದೇವಸ್ಥಾನಗಳಿಗೆ ಈ ಪ್ಯಾಕೇಜ್ ಪ್ರವಾಸ ಇರಲಿದ್ದು, ಊಟ, ಉಪಹಾರ ಹೊರತುಪಡಿಸಿ ಪ್ರತಿ ಪ್ರಯಾಣಿಕರಿಗೆ ಕನಿಷ್ಠ ದರ ನಿಗದಿಪಡಿಸಲಾಗಿದೆ. ಒಂದು ದಿನದ ಪ್ರವಾಸ ಇದಾಗಿದ್ದು, ಬೆಳಗ್ಗೆ ಹೊರಟರೆ, ದೇವಸ್ಥಾನಗಳ ದರ್ಶನ ಮುಗಿಸಿ ಸಂಜೆ ವೇಳೆಗೆ ವಾಪಸ್ ಆಗಬಹುದು.
ಹಸಿರು ಬಣ್ಣದ ನರ್ಮ್ ಬಸ್‌ನ್ನು ಇದಕ್ಕೆ ಪ್ರಾಯೋಗಿಕವಾಗಿ ಬಳಸಲಾಗುತ್ತಿದ್ದು, ಒಂದು ಬಸ್‌ನಲ್ಲಿ 40 ಮಂದಿಗೆ ಅವಕಾಶ ಇರುತ್ತದೆ. ಬೆಳಗ್ಗೆ 8 ಗಂಟೆಗೆ ಬಿಜೈ ಬಸ್ ನಿಲ್ದಾಣದಿಂದ ಹೊರಟರೆ, ರಾತ್ರಿ 8.30ಕ್ಕೆ ನಿಲ್ದಾಣಕ್ಕೆ ಮರಳಲಿದೆ. ಚಾಲಕನಲ್ಲದೆ, ಓರ್ವ ಸಹಾಯಕನೂ ಇರಲಿದ್ದಾರೆ.
ಈಗಾಗಲೇ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್(9663211553) ಆರಂಭಿಸಲಾಗಿದೆ.
ಅಲ್ಲದೆ ಬಸ್ ಹೊರಡುವ ಮುನ್ನ ಸ್ಥಳದಲ್ಲೇ ಟಿಕೆಟ್ ಕೂಡ ನೀಡಲಾಗುತ್ತದೆ. ವಯಸ್ಕರಿಗೆ 300 ರೂ. ಹಾಗೂ 6 ವರ್ಷ ಮೇಲ್ಪಟ್ಟಮಕ್ಕಳಿಗೆ 250 ರು. ನಿಗದಿಪಡಿಸಲಾಗಿದೆ.