ಸಂಸ್ಕೃತದಲ್ಲಿ ಏನಿದೆ ಎನ್ನುವುದಕ್ಕಿಂತ ಸಂಸ್ಕೃತದಲ್ಲಿ ಏನಿಲ್ಲ ಎಂದು ತಿಳಿಯಬೇಕು, ಸಂಸ್ಕೃತ ದೇವಭಾಷೆ, ಇದರಲ್ಲಿ ಎಲ್ಲಾ ಜ್ಞಾನವು ಅಡಕವಾಗಿದೆ ಎಂದು ದಾವಣಗೆರೆ ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಶ್ರೀ ಸ್ವಾಮಿ ತ್ಯಾಗೀಶ್ವರಾನಂದ ಮಹಾರಾಜ್ ತಿಳಿಸಿದರು.
ಅವರು ಇಂದು ದಾವಣಗೆರೆ ಟಿ.ಸಿ.ಲೇ ಔಟ್ ನಲ್ಲಿರುವ ಅಕ್ಷರ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಮೊಗ್ಗದ ವಾಸವಿ ಅಕಾಡೆಮಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯವರು, ಸಂಸ್ಕೃತ ಭಾರತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿರುವ ಸಂಸ್ಕೃತ ಪಠ್ಯಕ್ರಮದ ಸಂಸ್ಕೃತ ಕಲಿಕಾ ಕೇಂದ್ರದ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತ ಸಂಸ್ಕೃತ ಕೇವಲ ಅಂಕಗಳಿಸುವ ಸಾಧನವಲ್ಲ ಭಗವಂತನನ್ನು ಅರಿಯಲು ಸಾಧನವಾಗುತ್ತದೆ ಏಕೆಂದರೆ ನಮ್ಮ ದೇಶದ ಪ್ರಮುಖ ಧರ್ಮ ಗ್ರಂಥಗಳೆಲ್ಲವೂ ಸಂಸ್ಕೃತದಲ್ಲಿದೆ ಇದನ್ನು ಮೂಲದಲ್ಲಿಯೇ ಓದಿ ಭಗವಂತನ ಹಾಗೂ ಅವನ ಉಪದೇಶಗಳನ್ನು ಅರಿಯಲು ಸಂಸ್ಕೃತ ಕಲಿಕೆ ಅನಿವಾರ್ಯ ಎಂದು ಹೇಳಿದರು.
ಮನುಷ್ಯನಾದವನು ದೇವನಾಗಲು ಸಾದ್ಯವೆಂದಾದರೆ ಅದು ಸಂಸ್ಕೃತ ಅಧ್ಯಯನದಿಂದ ಮಾತ್ರವೆಂದು ತಿಳಿಸಿದರು. ನಮ್ಮ ಜೀವನ ಪವಿತ್ರ ಮಾಡಿಕೊಳ್ಳಲು, ನಮ್ಮಲ್ಲಿರುವ ಅಲ್ಪಭಾವನೆ ದೂರವಿಡುವಲ್ಲಿ ಸಂಸ್ಕೃತ ಶ್ಲೋಕ, ಸುಭಾಷಿತ, ರಾಮಾಯಣ, ಮಹಾಭಾರತ, ಗೀತೆ ಮುಂತಾದ ಸಾಹಿತ್ಯಗಳು ನಮಗೆ ತುಂಬಾ ಸಹಕಾರಿಯಾಗಲಿದೆ ಎಂದು ಸಂಸ್ಕೃತದ ಮಹತ್ವವನ್ನು ವಿಸ್ತಾರವಾಗಿ ತಿಳಿಸಿದರು.
ವಿದೇಶಿಯರು ತಮ್ಮ ಸಂಶೋದನೆಗೆ ಮುನ್ನ ಸಂಸ್ಕೃತವನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದರು, ಹಾಗಾಗಿ ಅವರು ತಮ್ಮ ಸಂಶೋಧನೆಯಲ್ಲಿ ಪ್ರಗತಿಯನ್ನು ಕಾಣುತ್ತಿದ್ದರು, ನಮ್ಮ ದೇಶದಲ್ಲಿ ಸಂಸ್ಕೃತ ಕಲಿಕೆಯಾಗಬೇಕೆಂಬ ಕೂಗು ಎಲ್ಲಡೇ ಕೇಳಿಬರುತ್ತಿದೆ, ಕೇವಲ ಕೂಗುವುದರಿಂದ ಅದು ಸಾದ್ಯವಿಲ್ಲ ಪ್ರತಿಯೊಬ್ಬರು ಸಂಸ್ಕೃತ ಅಧ್ಯಯನ ಮತ್ತು ಅಭ್ಯಾಸ ಮಾಡುವುದರಿಂದ ಸಾದ್ಯವೆಂದರು.
ಸಂಸ್ಕೃತ ಕಲಿಕೆಯಿಂದ ನಮ್ಮಲ್ಲಿರುವ ಸುಪ್ತ ಚೈತನ್ಯ ಜಾಗ್ರತಗೊಳ್ಳುವುದು, ಸಂಸ್ಕೃತ ಕೇವಲ ಭಾಷೆಯಲ್ಲ ಇದೊಂದು ದೊಡ್ಡ ಪ್ರಪಂಚ ಇದರಲ್ಲಿ, ಜ್ಞಾನ, ವಿಜ್ಞಾನ, ಖಗೋಳ, ಜೀವಶಾಸ್ತ್ರ, ಗಣಿತ, ಆಯುರ್ವೇದ, ಯೋಗ ಹೀಗೆ ಎಲ್ಲಾ ವಿಷಯಗಳನ್ನು ಒಳಗೊಂಡಿದೆ ಇಂತಹ ಜ್ಞಾನ ಭಂಡಾರವನ್ನು ಈ ಶಾಲೆಯವರು ಈ ವರ್ಷದಿಂದ ಶಿಶುವಿಹಾರದಿಂದ ಏಳನೇ ತರಗತಿಯ ಮಕ್ಕಳಿಗೆ ಕಲಿಸುವ ಯೋಜನೆ ನಿಜಕ್ಕೂ ಶ್ಲಾಘನೀಯ, ಇದನ್ನು ಇಲ್ಲಿ ಕಲಿಯುತ್ತಿರುವ ಮಕ್ಕಳು ಪುಣ್ಯವಂತರು, ಇಂತಹ ಯೋಜನೆ ಜಾರಿಗೆ ತಂದ ಶಾಲೆಯ ಆಡಳಿತ ವರ್ಗಕ್ಕೂ ಸಂಸ್ಕೃತ ಭಾರತಿ, ವಾಸವಿ ಅಕಾಡೆಮಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದರು.
ಶಾಲಾಸು ಯೋಜನೆಯ ರಾಜ್ಯ ಸಂಯೋಜಕರಾದ ಶಿವಮೊಗ್ಗದ ಅ.ನಾ.ವಿಜಯೇಂದ್ರ ರಾವ್ ರವರು ಪ್ರಾಸ್ಥಾವಿಕವಾಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲೆಯ ಸಂಸ್ಕೃತ ಭಾರತಿ ಜಿಲ್ಲಾಧ್ಯಕ್ಷರಾದ ಎನ್.ವಿ.ಶಂಕರನಾರಾಯಣ ವಹಿಸಿದ್ದರು.
ಕಾಯಕ್ರಮದಲ್ಲಿ ಶ್ರೀ ಪವಾಡ ಬಸವೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷರು ಹಾಗೂ ಅಕ್ಷರ ಶಾಲೆಯ ಸ್ಥಾಪಕರು ಆದ ಟಿ.ಎಸ್.ಮಲ್ಲಿಕಾರ್ಜುನ, ಸಾಮಾಜಿಕ ಹೋರಾಟಗಾರರು ಮತ್ತು ಯುವ ಬ್ರಿಗೇಡ್ ಪ್ರಮುಖರು ಆದ ಗಜೇಂದ್ರ, ಶಾಲಾ ಕಾರ್ಯದರ್ಶಿ ಕವಿತ, ಮುಖ್ಯ ಅತಿಥಿಗಳಾಗಿ ದಾವಣಗೆರೆ ಬಕ್ಕೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ವಿನಯಾನಂದ ಸ್ವಾಮಿ, ಶಿವಮೊಗ್ಗದ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಎಮ್.ವಿ.ಪಿ.ಆರಾದ್ಯ ಉಪಸ್ಥಿತರಿದ್ದರು.
ಶಿಕ್ಷಕಿ ಸುಮ ಸ್ವಾಗತಿಸಿದರು ಶಿಕ್ಷಕಿ ಪ್ರಿಯ ವಂದಿಸಿದರು. ಶಿಕ್ಷಕಿ ಶ್ವೇತ ಕಾರ್ಯಕ್ರಮ ನಿರೂಪಿಸಿದರು.
ಅ.ನಾ.ವಿಜಯೇಂದ್ರ ರಾವ್, ಶಿವಮೊಗ್ಗ ೯೪೪೮೭೯೦೧೨೭/೧೬-೦೯-೨೦೨೨