ಶಿವಮೊಗ್ಗ ನಗರದ ಶ್ರೀ ಶಿವಗಂಗಾ ಯೋಗಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ. ಸಿ.ವಿ.ರುದ್ರಾರಾಧ್ಯ ಅವರು 80ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿ ವರ್ಗ ಹಾಗೂ ಶಿಷ್ಯರು ಗೌರವ ಸಮರ್ಪಿಸಿ ಶುಭಹಾರೈಸಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ. ಸಿ.ವಿ.ರುದ್ರಾರಾಧ್ಯ ಅವರು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಯೋಗ ತರಗತಿ ಕೇಂದ್ರಗಳ ಮೂಲಕ ಸಾವಿರಾರು ಜನರಿಗೆ ಯೋಗ ತರಬೇತಿ ನೀಡಿದ್ದಾರೆ. ಇವರ ಜನ್ಮದಿನದ ಪ್ರಯುಕ್ತ ಶಿಷ್ಯರು ಗೌರವ ಸಮರ್ಪಿಸಿದರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಯೋಗಕ್ಕಾಗಿ ಅವರ ಜೀವನವನ್ನು ಸಮರ್ಪಿಸಿ ಶಿಷ್ಯ ವೃಂದದವರಿಗೆ ಚೈತನ್ಯ ಚಿಲುಮೆಯಂತೆ ರುದ್ರಾ ಆರಾಧ್ಯರು ಇದ್ದಾರೆ. ಯೋಗ ಕೇಂದ್ರಕ್ಕೆ ಸಲ್ಲಿಸುತ್ತಿರುವ ನಿಷ್ಕಾಮ ಸೇವೆ ಮತ್ತು ಅವರ ಸಾರ್ಥಕ ಜೀವನ ಎಲ್ಲರಿಗೂ ಪ್ರೇರಣೆ ಎಂದು ತಿಳಿಸಿದರು.
ಮನುಷ್ಯನ ಹುಟ್ಟು ಸಾರ್ಥಕವಾಗ ಬೇಕಾದರೆ ಸಮಾಜಮುಖಿಯಾಗಿ ಜೀವನ ನಡೆಸಬೇಕು. ನಮ್ಮ ಸೇವೆಯು ಸಮಾಜದ ಎಲ್ಲರಿಗೂ ತಲುಪಬೇಕು. ಸಾರ್ಥಕ ಹಾಗೂ ಸಾಧನೆಯ ಜೀವನ ನಮ್ಮದಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಗಂಗಾ ಯೋಗ ಟ್ರಸ್ಟ್ ಅಧ್ಯಕ್ಷ, ಕೈಗಾರಿಕೋದ್ಯಮಿ ಬಿ.ಸಿ.ನಂಜುಡ ಶೆಟ್ಟಿ ಮಾತನಾಡಿ, ಯೋಗ ಕೇಂದ್ರದ ನಿರ್ಮಾಣದಲ್ಲಿ ರುದ್ರಾರಾಧ್ಯರ ಶ್ರಮ ಅಪಾರ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ರುದ್ರಾರಾಧ್ಯರು ಇಳಿವಯಸ್ಸಿನಲ್ಲೂ ಯುವಕರಂತೆ ಚಟುವಟಿಕೆಯಿಂದ ಯೋಗ ಸಮಾಜದ ಸೇವೆಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ. ಸಿ.ವಿ.ರುದ್ರರಾಧ್ಯ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಯೋಗಕೇಂದ್ರದ ಯಶಸ್ಸಿಗೆ ಎಲ್ಲರ ಸಹಕಾರವು ಕಾರಣ. ಜೀವನದಲ್ಲಿ ಉತ್ತಮ ಕಾರ್ಯ ನಡೆಸಲು ಸಹಕರಿಸಿದ ಎಲ್ಲರಿಗೂ ಚಿರಋಣಿ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಲಗೋಡು ರತ್ನಾಕರ್, ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್, ಜಿ.ವಿಜಯಕುಮಾರ್, ವಿಜಯ ಬಾಯರ್, ಪ್ರೊ. ಎ.ಎಸ್.ಚಂದ್ರಶೇಖರ್, ಡಾ. ಪದ್ಮನಾಭ ಅಡಿಗ, ಕಾಟನ ಜಗದೀಶ, ಪರಿಸರ ನಾಗರಾಜ್, ಹೊಸತೋಟ ಸೂರ್ಯನಾರಾಯಣ, ಜಿ.ಎಸ್.ಓಂಕಾರ, ಲವಕುಕುಮಾರ್ ಉಪಸ್ಥಿತರಿದ್ದರು.