ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 13.5ರ ಪ್ರಗತಿ ದಾಖಲಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಅಂದರೆ ಏಪ್ರಿಲ್-ಜೂನ್ 2021ರಲ್ಲಿ ಭಾರತದ ಜಿಡಿಪಿ ಶೇ 20.1ರಷ್ಟು ಪ್ರಗತಿ ಸಾಧಿಸಿತ್ತು ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ತಿಳಿಸಿದೆ.
ಭಾರತದ ಆರ್ಥಿಕತೆಯ ಮೂಲಾಂಶಗಳು ಸದೃಢವಾಗಿರುವುದರಿಂದ ಈ ಬಾರಿಯ ಜಿಡಿಪಿ ಪ್ರಗತಿ ಎರಡಂಕಿ ದಾಖಲಾಗಬಹುದು ಎಂದು ಮೊದಲೇ ಹಲವು ಸಂಸ್ಥೆಗಳು ವಿಶ್ಲೇಷಿಸಿದ್ದವು.
2022ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತವು ಶೇ 13ರ ಪ್ರಗತಿ ದಾಖಲಿಸಬಹುದು ಎಂದು ಇಕ್ರಾ ವಿಶ್ಲೇಷಿಸಿತ್ತು.
ಭಾರತೀಯ ಸ್ಟೇಟ್ ಬ್ಯಾಂಕ್ನ ಅರ್ಥಶಾಸ್ತ್ರಜ್ಞರು ಜಿಡಿಪಿ ಪ್ರಗತಿಯು ಶೇ 15.7 ಇರಬಹುದು ಎಂದು ಅಂದಾಜಿಸಿದ್ದರು. ಇದೇ ತಿಂಗಳ ಆರಂಭದಲ್ಲಿ ಹಣಕಾಸು ಮಾರ್ಗದರ್ಶಿ ಸಮಿತಿ ಸಭೆ ನಡೆಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಪ್ರಗತಿಯು ಶೇ 16.2 ಇರಬಹುದು ಎಂದು ಅಂದಾಜಿಸಿತ್ತು. ಇದೇ ಅವಧಿಯಲ್ಲಿ ಚೀನಾದ ಶೇ 0.4ರ ಜಿಡಿಪಿ ಪ್ರಗತಿ ದಾಖಲಿಸಿದೆ.
