ಛತ್ತೀಸ್‌ಗಢದ ರಾಯ್ಪುರ ಜಿಲ್ಲೆಯ ತುಸ್ಲಿ ಎಂಬ ಗ್ರಾಮ ಕ್ರಿಯೇಟರ್‌ಗಳನ್ನು ಸೃಷ್ಟಿಸಿರುವ ಗ್ರಾಮವೆಂದೇ ಹೆಸರುವಾಸಿ.
ಈ ಊರಿಗೆ “ಯೂಟ್ಯೂಬ್ ಹಬ್’ ಎಂದೂ ಕರೆಯಲಾಗುತ್ತದೆ. ಇಲ್ಲಿ ಪ್ರತಿ ಬೀದಿಯಲ್ಲಿ ಕ್ರಿಯೇಟರ್‌ಗಳು ಸಿಗುತ್ತಾರೆ. ಪ್ರತಿದಿನ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ.
ಎಸ್‌ಬಿಐನಲ್ಲಿ ಇಂಟರ್‌ನೆಟ್ ಇಂಜಿನಿಯರ್ ಆಗಿದ್ದ ಜ್ಞಾನೇಂದ್ರ ಶುಕ್ಲಾ ಹಾಗೂ ಶಿಕ್ಷಕನಾಗಿದ್ದ ಜೈ ವರ್ಮಾ ಈ ಗ್ರಾಮದ ಮೊದಲ ಯೂಟ್ಯೂಬರ್‌ಗಳು.
ಇಬ್ಬರೂ 2011-12ರ ಸಮಯದಲ್ಲಿ ಕೆಲಸ ತ್ಯಜಿಸಿ ಯೂಟ್ಯೂಬ್ ಸೇರಿಕೊಂಡಿದ್ದಾರೆ. ಮೊದ ಮೊದಲಿಗೆ ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದೆಂದರೆ ಮುಜುಗರವಾಗುತ್ತಿತ್ತಂತೆ. ಆದರೆ ಗ್ರಾಮದ ಯುವ ಜನತೆ ಅವರನ್ನು ಪ್ರೋತ್ಸಾಹಿಸಿದ ಹಿನ್ನೆಲೆ ಅವರು ಹಿಂಜರಿಕೆ ಬಿಟ್ಟು ಎಲ್ಲೆಡೆ ಚಿತ್ರೀಕರಣ ಮಾಡಲಾರಂಭಿಸಿದ್ದಾರೆ.
ಇವರಿಬ್ಬರ ಚಾನೆಲ್ ಪ್ರಸಿದ್ಧತೆ ಪಡೆದುಕೊಂಡಿದೆ. ಅದರಿಂದ ಸ್ಫೂರ್ತಿ ಪಡೆದ ಗ್ರಾಮದ ಉತ್ಸಾಹಿತ ಜನರೆಲ್ಲರೂ ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ಗಳನ್ನು ತೆರೆದಿದ್ದಾರೆ. ಈ ಗ್ರಾಮದವರದ್ದು ಈಗ ಕನಿಷ್ಠ 40 ಯೂಟ್ಯೂಬ್ ಚಾನೆಲ್‌ಗಳಿವೆ.
ಇಲ್ಲಿರುವ 3000 ಜನರಲ್ಲಿ ಕನಿಷ್ಠ ಶೇ.40 ಮಂದಿ ಯೂಟ್ಯೂಬ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಇಲ್ಲಿನ ಯೂಟ್ಯೂಬರ್ ಜೈ ವರ್ಮಾ ಅವರು,
ಎಂ.ಎಸ್ಸಿ ಪದವೀಧರನಾದ ನಾನು ಕಾಲೇಜೊಂದರಲ್ಲಿ ಪಾರ್ಟ್ ಟೈಮ್ ಪ್ರಾಧ್ಯಾಪಕನಾಗಿದ್ದೆ. ನನ್ನದೇ ಆದ ಕೋಚಿಂಗ್ ಸೆಂಟರ್ ತೆರೆದುಕೊಂಡಿದ್ದೆ. ಆದರೆ ಆಗ ನನಗೆ ಸಿಗುತ್ತಿದ್ದದ್ದು ಮಾಸಿಕ 12-15 ಸಾವಿರ ರೂ. ಮಾತ್ರ. ಆದರೆ ಈಗ ಯೂಟ್ಯೂಬ್‌ನಿಂದ ತಿಂಗಳಿಗೆ 30-40 ಸಾವಿರದವರೆಗೆ ದುಡಿಯುತ್ತಿದ್ದೇನೆ’ ಎನ್ನುತ್ತಾರೆ.
ನಕ್ಸಲರ ಕಾಟವಿದ್ದಿದ್ದರಿಂದ ನಮ್ಮೂರಿನಲ್ಲಿ ಹೆಣ್ಣು ಮಕ್ಕಳಿಗೆ ಮನೆಯಿಂದ ಹೊರಗೆ ಬರುವುದಕ್ಕೆ ಅವಕಾಶವಿರಲಿಲ್ಲ. ಆದರೆ ಯೂಟ್ಯೂಬ್ ಚಾನೆಲ್‌ಗಳನ್ನು ಆರಂಭಿಸಿದಾಗಿನಿಂದ ನಾವೂ ಮನೆಯಿಂದ ಹೊರಗೆ ಸ್ವತಂತ್ರವಾಗಿ ಓಡಾಡುತ್ತಿದ್ದೇವೆ ಎನ್ನುತ್ತಾರೆ ಯುಟ್ಯೂಬ್ ಚಾನೆಲ್ ಮಾಡಿಕೊಂಡಿರುವ ತುಸ್ಲಿ ಗ್ರಾಮಸ್ಥೆ ಪಿಂಕು ಸಾಹು.