ಜಿ ಕೆಟಗರಿ ಸೈಟು ಹಂಚಿಕೆ ನಿಷೇಧಗೊಳಿಸಿದ್ದರೂ ಸಹ ಬದಲಿ ನಿವೇಶನ ಹಂಚಿಕೆ ಎಂಬ ವಾಮಮಾರ್ಗವನ್ನು ಹುಡುಕಿಕೊಂಡು ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ಇನ್ನಿತರ ಪ್ರಭಾವಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಎಎಪಿ ರಾಜೀನಾಮೆಗೆ ಆಗ್ರಹಿಸಿದೆ.
ಕಳೆದ 4ವರ್ಷಗಳಿಂದ ಅತಿವೃಷ್ಟಿ ಹಾವಳಿಯಿಂದ ರಾಜ್ಯದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿದ್ದರು ಸಹ ಅವರುಗಳಿಗೆ ಸೂಕ್ತ ಮನೆಗಳನ್ನು ಕಟ್ಟಿಕೊಡಲು ವಿಫಲರಾಗಿರುವ ಬಿಜೆಪಿ ಸರ್ಕಾರ ಈಗ ತನ್ನ ಮಂತ್ರಿ ಹಾಗೂ ಪ್ರಭಾವಿಗಳಿಗೆ ಈ ರೀತಿಯ ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ನಿವೇಶನಗಳನ್ನು ಹಂಚಿಕೆ ಮಾಡುವ ಪರಿ 40 %ಕಮಿಷನ್ ಬಿಜೆಪಿ ಸರ್ಕಾರದ ಮತ್ತೊಂದು ರೂಪವಾಗಿದೆ ಎಂದು ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸುಪ್ರೀಂಕೋರ್ಟ್ 2021 ರ ಅಕ್ಟೋಬರ್ 29 ರಂದು ಹೊರಡಿಸಿದ ಆದೇಶಕ್ಕೆ ವ್ಯತಿರಿಕ್ತವಾಗಿ ಈ ರೀತಿಯ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆರ್ ಎಂವಿ ಬಡಾವಣೆ ಯಂತಹ ಪ್ರತಿಷ್ಠಿತ ಜಾಗದಲ್ಲಿ ಮಂತ್ರಿ ಮಹೋದಯರು ಗಳಿಗೆ ಸೈಟು ಹಂಚಿಕೆಯ ಅವ್ಯವಹಾರಗಳಲ್ಲಿ ಮುಳುಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ದೇಶದ ಅತ್ಯುನ್ನತ್ತ ನ್ಯಾಯಾಲಯಗಳ ಆದೇಶಗಳಿಗೂ ಸಹ ಕಿಂಚಿತ್ತೂ ಕಿಮ್ಮತ್ತು ಈ ಬಿಜೆಪಿ ಸರ್ಕಾರ ನೀಡುತ್ತಿಲ್ಲವೆಂದು ಎಂದು ಮೋಹನ್ ದಾಸರಿ ವಿಷಾದ ವ್ಯಕ್ತಪಡಿಸಿದರು.
ಉಂಡೂ ಹೋದ ಕೊಂಡೂ ಹೋದ ಎಂಬಂತೆ ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆಯನ್ನು ಹಾಳುಗೆಡವಿದ ಗೃಹಸಚಿವ ಆರಗ ಜ್ಞಾನೇಂದ್ರ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಈ ಪ್ರಕರಣದಿಂದ ಸ್ಪಷ್ಟವಾಗುತ್ತಿದೆ.
ಈ ಕೂಡಲೇ ಆರಗ ಜ್ಞಾನೇಂದ್ರ ರನ್ನು ಸಂಪುಟದಿಂದ ವಜಾಗೊಳಿಸಬೇಕು ಅಥವಾ ಮರ್ಯಾದೆಯಿಂದ ತಾವೇ ರಾಜೀನಾಮೆ ನೀಡಬೇಕೆಂದು ರಾಜ್ಯ ವಕ್ತಾರ ಹಾಗೂ ಹಿರಿಯ ಮಾಜಿ ಕೆಎಎಸ್ ಅಧಿಕಾರಿ ಕೆ. ಮಥಾಯಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಆಮ್ ಆದ್ಮಿ ಪಕ್ಷವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತೀವ್ರವಾದ ಹೋರಾಟಕ್ಕೆ ಇಳಿಯಲಿದೆ ಎಂದು ಸರಕಾರವನ್ನು ಎಚ್ಚರಿಸಿದರು.