ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿನ ನಡೆಗಳ ಬಗ್ಗೆ ತುಂಬಾ ದಿನಗಳ ಹಿಂದೆಯೇ ಕೋಪಿಸಿಕೊಂಡಿದ್ದ ಆಜಾದ್, ಇಂದು ಪಕ್ಷದ ಎಲ್ಲಾ ಸ್ಥಾನ-ಮಾನಗಳಿಗೂ ರಾಜೀನಾಮೆ ಘೋಷಿಸಿದ್ದಾರೆ. ರಾಜೀನಾಮೆ ನೀಡಿ ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ 4 ಪುಟಗಳ ಸುದೀರ್ಘ ಪತ್ರವನ್ನ ಬರೆದು, ರಾಹುಲ್ ಗಾಂಧಿ ವಿರುದ್ಧ ನೇರ ಅಸಮಾಧಾನ ಹೊರಹಾಕಿದ್ದಾರೆ.
ರಾಹುಲ್ ಬಾಲೀಶ ವರ್ತನೆಗೆ ಕಿಡಿ
ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ಬಾಲೀಶ ವರ್ತನೆ ಮಾಡುತ್ತಾರೆ ಎಂದು ಆಜಾದ್ ಆರೋಪಿಸಿದ್ದಾರೆ. 2014ರ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ‘ಬಿಕ್ಕಟ್ಟಿನ ಪರಿಸ್ಥಿತಿ’ಗೆ ರಾಹುಲ್ ಗಾಂಧಿಯೇ ನೇರ ಕಾರಣ. 2013ರ ಜನವರಿಯಲ್ಲಿ ರಾಹುಲ್ ಗಾಂಧಿಯನ್ನ ನೀವು ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ಮಾಡಿದ್ದೀರಿ. ಅವರು ಪಕ್ಷದಲ್ಲಿನ ಸಮಾಲೋಚನೆಯ ವ್ಯವಸ್ಥೆಯನ್ನು ಕೊನೆಗೊಳಿಸಿದರು. ಎಲ್ಲಾ ಹಿರಿಯ, ಅನುಭವಿ ನಾಯಕರನ್ನು ಬದಿಗೊತ್ತಿ, ಅನುಭವವೇ ಇಲ್ಲದವರು ಪಕ್ಷವನ್ನು ನಡೆಸತೊಡಗಿದರು.
ಹೀಗಿರುವಾಗ ಪಕ್ಷ ‘ಭಾರತ್ ಜೋಡೋ’ ಯಾತ್ರೆಯನ್ನ ಮಾಡಲು ಮುಂದಾಗಿದೆ. ‘ಭಾರತ್ ಜೋಡೋ’ ಬದಲಾಗಿ ‘ಕಾಂಗ್ರೆಸ್ ಜೋಡೋ’ ಮಾಡಿ ಎಂದು ರಾಹುಲ್ ಗಾಂಧಿಗೆ ಕಿವಿ ಮಾತು ಹೇಳಿದ್ದಾರೆ. ಸೆಪ್ಟೆಂಬರ್ 7 ರಿಂದ ಕಾಂಗ್ರೆಸ್ ‘ಭಾರತ್ ಜೋಡೋ’ ಯಾತ್ರೆಯನ್ನ ಮಾಡ್ತಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತ್ ಜೋಡೋ ಯಾತ್ರೆ ನಡೆಯಲಿದೆ. 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಮೂಲಕ ಈ ಯಾತ್ರೆ ನಡೆಯಲಿದೆ.