ವಿಧಾನಸೌಧದ ಮುಂಭಾಗದಲ್ಲಿ ಎರಡು ಸಾರ್ವಜನಿಕ ಸೇವೆಗಳ ಜೊತೆ, ಸಾರಿಗೆ ಇಲಾಖೆಯ 30 ಸಂಪರ್ಕರಹಿತ ಆನ್ಲೈನ್ ಸೇವೆಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದರು.
ಈ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನಸೇವಕ ಮತ್ತು ಜನಸ್ಪಂದನೆ ಯೋಜನೆಗಳಿಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿ, “ಆಳುವವರು ಹಾಗೂ ಆಡಳಿತ ನಡೆಸುವವರ ಜವಾಬ್ದಾರಿಯಾಗಿದೆ. ಉತ್ತರದಾಯಿತ್ವದ ಬಗ್ಗೆ ಸ್ಪಷ್ಟತೆ ಇಲ್ಲ.ಆದ್ದರಿಂದ ತಳಹಂತದಲ್ಲಿ ನಾಗರಿಕ ಸೇವೆ ಮತ್ತು ಸರಕಾರದ ನಡುವೆ ಗೋಡೆ ಎದ್ದು ನಿಂತಿದೆ. ಸೇವೆಗಳನ್ನು ಹಣ ಕೊಟ್ಟು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಅಧಿಕಾರಶಾಹಿ ವಿಳಂಬ ಧೋರಣೆ ಅನುಸರಿಸುತ್ತಿದೆ.ಇದರಿಂದ ನಾಗರಿಕ ಸೇವೆಗಳಿಂದ ವಂಚಿತರಾಗುತ್ತಿರುವ ಜನರ ಮನೆ ಬಾಗಿಲಿಗೆ ಸೌಕರ್ಯ ಒದಗಿಸುವ ಮಹತ್ವಾಕಾಂಕ್ಷೆಯ ಉದ್ದೇಶವನ್ನು ಈ ಯೋಜನೆ ಹೊಂದಿವೆ ಎಂದು ತಿಳಿಸಿದರು.
ಜನಸೇವಕ ಯೋಜನೆಯಡಿಯಲ್ಲಿ, ಆಧಾರ್ ನವೀಕರಣ, ವಿಧವಾ ವೇತನ,ಆದಾಯ ಅಥವಾ ಜಾತಿ ಪ್ರಮಾಣಪತ್ರ, ಪಿಂಚಣಿ ಇತ್ಯಾದಿ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ.
ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ ಫೋರ್ಟಲ್ ನಲ್ಲಿ ಲಾಗಿನ್ ಆಗುವ ಮೂಲಕ ಅಥವಾ 1902 ಸಹಾಯವಾಣಿಗೆ ಕರೆ ಮಾಡಿ 33 ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಿ ಆನ್ ಲೈನ್ ಸೇವೆ ಪಡೆಯಬಹುದು. ಆರೋಗ್ಯ , ನೀರು ಮತ್ತು ವಿದ್ಯುದ್ಛಕ್ತಿ ವಲಯ ಹೊರತುಪಡಿಸಿ ಇತರೆ ದೂರುಗಳಿಗೆ ಪರಿಹಾರ ಪಡೆದುಕೊಳ್ಳುವ ವ್ಯವಸ್ಥೆ ಯೇ ಜನಸ್ಪಂದನ ಯೋಜನೆ ಎಂದು ತಿಳಿಸಿದರು.
ಸದ್ಯ ಬೆಂಗಳೂರು ನಗರದಲ್ಲಿ ಈ ಸೇವೆ ಜಾರಿಗೊಳಿಸಲಾಗಿದೆ. ಇಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಲೋಪದೋಷಗಳಿದ್ದರೆ ಸರಿಪಡಿಸಿ ಜ.26 ಕ್ಕೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಜನರು ಇಲಾಖೆಗಳ ಬಳಿ ಬರುವ ಬದಲಿಗೆ ಆಡಳಿತವೇ ಜನರ ಬಳಿ ಹೋಗುವ ಈ ವ್ಯವಸ್ಥೆಯು ಕ್ರಾಂತಿಕಾರಿ ಎಂದು ಬೊಮ್ಮಾಯಿ ಹೇಳಿದರು.
ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ, ಬಿ.ಸಿ. ನಾಗೇಶ್, ಶಾಸಕರಾದ ರಿಜ್ವಾನ್ ಅರ್ಷದ್,
ಸುರೇಶ್ ಕುಮಾರ್, ಮಹಾಂತೇಶ್ ಕವಟಗಿಮಠ ಇನ್ನಿತರರು ಉಪಸ್ಥಿತರಿದ್ದರು.
ಮನೆ ಬಾಗಿಲಿಗೆ ಸರ್ಕಾರಿ ಸೇವೆ
Date: