ಜಗತ್ತಿನಾದ್ಯಂತ ಇಂದು ವಿಶ್ವ ಛಾಯಾಗ್ರಾಹಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಪದಗಳಲ್ಲಿ ಹೇಳಲಾಗದ್ದನ್ನ ಫೋಟೋ ಮೂಲಕ ಹೇಳಬಹುದಾದ ಅದ್ಬುತ ಶಕ್ತಿ ಈ ಫೋಟೋಗ್ರಫಿಯಲ್ಲಿದೆ.
ಜಗತ್ತಿನಲ್ಲಿ ಉದ್ಬವಿಸಬಹುದಾದ ಕಠಿಣ ಸನ್ನಿವೇಶಗಳಲ್ಲಿ ಛಾಯಾಗ್ರಾಕರು ತಮ್ಮ ಚಾಕಚಕ್ಯತೆಯನ್ನ ಮರೆದಿದ್ದಾರೆ. ಯುದ್ಧವಾಗಲಿ, ಪ್ರಕೃತಿ ವಿಕೋಪಗಳಾಗಲಿ ಎಂತಹ ವಿಷಮ ಸನ್ನಿವೇಶದಲ್ಲೂ ತಮ್ಮ ಜೀವದ ಹಂಗು ತೊರೆದು ಕ್ಲಿಕ್ಕಿಸುವ ತಮ್ಮ ಫೋಟೋಗಳ ಮೂಲಕ ಮಾಹಿತಿಯನ್ನ ಜನರಿಗೆ ಮುಟ್ಟಿಸುವಂತ ಕೆಲಸವನ್ನ ಮಾಡುತ್ತಿದ್ದಾರೆ.
ಈ ಸಾಲಿನಲ್ಲಿ ತಟ್ಟನೇ ನೆನಪಾಗುವುದು ಶಿವಮೊಗ್ಗದ ಹಿರಿಯ ಫೋಟೋಗ್ರಾಫರ್ ಶಿವಮೊಗ್ಗ ನಂದನ್..
ಶಿವಮೊಗ್ಗ ನಂದನ್ ಇವರು 1967ರಲ್ಲಿ ಶಿವಮೊಗ್ಗದ ಅರಸಳು ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಮಾದೇಗೌಡ ತಾಯಿ ಮಾಯಮ್ಮ.
ಇವರು 1988ರಲ್ಲಿ ತಮ್ಮ ಛಾಯಾಗ್ರಾಹಕ ವೃತ್ತಿ ಪ್ರಾರಂಭಿಸಿದರು. 1994ರಿಂದ ಹೊಸದಿಗಂತ, ಜನವಾಹಿನಿ, ಕನ್ನಡ ಪ್ರಭ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳಿಗೆ ಛಾಯಾಗ್ರಹಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಇವರು ಶಿವಮೊಗ್ಗ ಹಾಗೂ ಕರ್ನಾಟಕದ ಹಲವೆಡೆ ಛಾಯಾಚಿತ್ರ ನೀಡಿದ್ದಾರೆ. ಇವರು ಫೋಟೋಗ್ರಾಫಿ ಯೊಂದಿಗೆ ಭಾವಚಿತ್ರಗಳು, ವನ್ಯ ಜೀವಿ, ಲ್ಯಾಂಡ್ಸ್ಕೇಪ್ , ಹಾವುಗಳ ವಿಶೇಷ ಚಿತ್ರಗಳು, ಪಕ್ಷಿ ಚಿತ್ರಗಳು, ಕೈಗಾರಿಕಾ ಛಾಯಾ ಚಿತ್ರಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
ಇವರು ನೈನಿತಾಲ್, ದೆಹಲಿ, ಮುಂಬೈ ಮುಂತಾದ ಕಡೆ ಆಹ್ವಾನದ ಮೇರೆಗೆ ಛಾಯಾಚಿತ್ರ ಪ್ರದರ್ಶನಗಳನ್ನು ನೀಡಿದ್ದಾರೆ.
ಸುಧಾ, ಪ್ರಜಾವಾಣಿ, ತರಂಗ, ಉದಯವಾಣಿ, ಕಸ್ತೂರಿ , ತುಷಾರ, ಸಖಿ, ಮಯೂರ, ಹಾಗೂ ಇನ್ನು ಅನೇಕ ಪತ್ರಿಕೆಗಳಲ್ಲಿ ಇವರ ಛಾಯಾಚಿತ್ರಗಳು ಪ್ರಕಟಗೊಂಡಿವೆ. ಜೊತೆಗೆ ಪುಸ್ತಕಗಳ ರಕ್ಷಾಪುಟ, ಶುಭಾಶಯ ಪತ್ರಗಳ ಮುಖಪುಟ, ಜಾಹೀರಾತು ವಿನ್ಯಾಸಗಳಲ್ಲಿ ಇವರ ಛಾಯಾಚಿತ್ರಗಳು ಬಳಕೆಯಾಗಿವೆ .ಕರ್ನಾಟಕದ ಹಲವೆಡೆ ಛಾಯಾಚಿತ್ರ ಪ್ರದರ್ಶನ ನೀಡಿದ್ದಾರೆ.
ಇವರ ಛಾಯಾಚಿತ್ರಗಳಿಗೆ ಕೋಲ್ಕತ್ತಾದಲ್ಲಿ ರಾಷ್ಟ್ರೀಯ ಪ್ರಶಸ್ತಿ, ನಾಲ್ಕು ರಾಜ್ಯ ಪ್ರಶಸ್ತಿ, ಜಿಲ್ಲಾಮಟ್ಟದಲ್ಲಿ ಅನೇಕ ಪ್ರಶಸ್ತಿಗಳು ಲಭಿಸಿವೆ.
, 2010ರ ಶಿವಮೊಗ್ಗ ದಸರಾದಲ್ಲಿ ಶಿವಮೊಗ್ಗ ನಗರಸಭೆಯ ವತಿಯಿಂದ ಪೌರ ಸನ್ಮಾನ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ದೊರೆತಿವೆ.
ತುಮಕೂರಿನಲ್ಲಿ 2015 -16ರ ರಾಜ್ಯಮಟ್ಟದ ಅನುಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
ಪ್ರಸ್ತುತ ಇವರು ಕನ್ನಡಪ್ರಭ ಹಾಗೂ ಇಂಡಿಯನ್ ಎಕ್ಸ್ಪ್ರೆಸ್ ಶಿವಮೊಗ್ಗ ಆವೃತ್ತಿಯ ಪ್ರಮುಖ ಛಾಯಾಚಿತ್ರಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.