ಗ್ರಾಮ ಪಂಚಾಯಿತಿಗಳು ಹಳ್ಳಿಗಳಿಗೆ ಸರ್ಕಾರ ಇದ್ದಂತೆ. ಅಧಿಕಾರ ವಿಕೇಂದ್ರೀಕರಣ ಮಾಡಿ ಗ್ರಾಮ ಸ್ವರಾಜ್ಯಕ್ಕೆ ನಾಂದಿ ಹಾಡಿದ ಮೊದಲ ರಾಜ್ಯ ಕರ್ನಾಟಕ. ಆದರೆ, ಈಗ ಅದೇ ಸರ್ಕಾರ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ 12ಎಲ್, 43ಎ , 48(4-5)ರ ಅನ್ವಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ವಜಾಮಾಡುವ ಪ್ರಕ್ರಿಯೆ ನಿಯಮಗಳು-2022 ಕರಡು ಅಧಿಸೂಚನೆ ಹೊರಡಿಸುವ ಮೂಲಕ ಅವರ ಅಧಿಕಾರ ಮೊಟಕುಗೊಳಿಸುವ ಹುನ್ನಾರ ನಡೆಸಿದೆ ಎಂಬ ಆರೋಪ ಕೇಳಿ ಬರುತ್ತಿವೆ.
ದುರ್ನಡತೆ ಹೆಸರಿನಲ್ಲಿ ದೂರು ಸ್ವೀಕಾರ, ತನಿಖೆ, ವಿಚಾರಣೆ ಜವಾಬ್ದಾರಿಯನ್ನು ಕೆಳ ಹಂತದ ಅಧಿಕಾರಿಗಳಿಗೆ ನೀಡುವ ಮೂಲಕ ಸರ್ಕಾರ ಗ್ರಾಪಂ ಪ್ರತಿನಿಧಿಗಳ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಸರ್ಕಾರ ಹೊರಟಿದೆ ಎಂಬ ದೂರು ಕೇಳಿ ಬರುತ್ತಿವೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಧಿಕಾರಶಾಹಿ ವ್ಯವಸ್ಥೆಯ ಮೂಲಕ ಕಟ್ಟಿಹಾಕುವ ಹುನ್ನಾರ ಇದಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಟೀಕಿಸಿದೆ. ಪಿಡಿಒ ಹೊರತುಪಡಿಸಿ ಎಲ್ಲ ಹಂತದ ಅಧಿಕಾರಿಗಳ ಮೂಲಕ ಪಂಚಾಯಿತಿ ಸದಸ್ಯರನ್ನು ನಿಯಂತ್ರಿಸುವ ಪ್ರಯತ್ನದ ಫಲ ಈ ಅಧಿಸೂಚನೆಯಾಗಿದೆ. ಜೊತೆಗೆ ಚುನಾಯಿತ ಪ್ರತಿನಿಧಿಗಳ ಕರ್ತವ್ಯದಲ್ಲಿ ಅಧಿಕಾರಶಾಹಿ ಹಸ್ತಕ್ಷೇಪ ಮಾಡುವ ಅಧಿಕಾರ ಕೊಡುವ ಪ್ರಯತ್ನ ನಡೆದಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
