ಮಾಡಿದ ಪಾಪಕ್ಕೆ ಇವತ್ತಿನ ಕಾಂಗ್ರೆಸ್ ಶಾಸ್ತಿ ಅನುಭವಿಸುತ್ತಿದೆ. ನಾನು ಮುಖ್ಯಮಂತ್ರಿ ಆಗಿದ್ದು ಅಂದು ರಾಷ್ಟ್ರಪಿತರು ತಂದುಕೊಟ್ಟ ಸ್ವಾತಂತ್ರ್ಯ ಹಾಗೂ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಜಗತ್ ಮಾನ್ಯ ಸಂವಿಧಾನದ ಕಾರುಣ್ಯದಿಂದ.
ಇದರಲ್ಲಿ ಕಾಂಗ್ರೆಸ್ ಪಾತ್ರ ಶೂನ್ಯ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟ ಮಾಡಿದ್ದೇ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆ ಅಪ್ರಭುದ್ಧತೆಯ ಪ್ರತೀಕ ಮತ್ತು ಪರಮ ಬಾಲಿಶ ಎಂದಿದ್ದಾರೆ.
ಅವರಿಗೆ ಗೊತ್ತಿರಲಿ, 1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ. ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಡಲು ಮಹಾತ್ಮಗಾಂಧಿ ನೇತೃತ್ವದ ಕಾಂಗ್ರೆಸ್ ಹೋರಾಟ ಮಾಡಿತ್ತು. ನಂತರದ ಕಾಂಗ್ರೆಸ್ ಮಾಡಿದ್ದೇ ಸ್ವಾತಂತ್ರ್ಯದ ಮಾರಣಹೋಮ ಎಂದು ಕಿಡಿಕಾರಿದ್ದಾರೆ.
ನಾನು ಪಂಡಿತ್ ನೆಹರು, ಲಾಲ ಬಹದ್ದೂರ ಶಾಸ್ತ್ರಿ ಅವರ ಬಗ್ಗೆ ಹಗುರವಾಗಿ ಮಾತನಾಡಲಾರೆ. ಅವರ ನಂತರ ಕಾಂಗ್ರೆಸ್ ಹೇಗೆಲ್ಲಾ ಹಾದಿತಪ್ಪಿ ಜನರ ಸ್ವಾತಂತ್ರ್ಯ ಹರಣ ಮಾಡಿತು ಎನ್ನುವದನ್ನು ಡಿ.ಕೆ.ಶಿವಕುಮಾರ್ ಅವರು ಇತಿಹಾಸ ಓದಿದರೆ ಸತ್ಯ ಅರಿವಾಗುತ್ತದೆ ಎಂದು ಹೇಳಿದ್ದಾರೆ.