ನಿರ್ಗಮಿತ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಸರ್ಕಾರಕ್ಕೆ ಮತ್ತು ವಿರೋಧ ಪಕ್ಷಕ್ಕೆ ಒಂದು ಸಲಹೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡುವ ತೀರ್ಪುಗಳನ್ನು ಸ್ವೀಕರಿಸುವ ಸಹಿಷ್ಣುತೆ ಬೇಕು. ಸಂಸತ್ತಿನಲ್ಲಿ ಆಡಳಿತ ಪಕ್ಷದಲ್ಲಿರುವ ಸದಸ್ಯರು ವಿರೋಧ ಪಕ್ಷಗಳ ಸದಸ್ಯರು ಮಾತನಾಡಲು, ತಮ್ಮ ಅಭಿಪ್ರಾಯ ಕೊಡಲು ಅವಕಾಶ ನೀಡಬೇಕು ಎಂದಿದ್ದಾರೆ.
ಸಂಸತ್ ಭವನದಲ್ಲಿ ಎಂ. ವೆಂಕಯ್ಯ ನಾಯ್ಡು ಅವರಿಗೆ ವಿದಾಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನುದೇಶಿಸಿ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ತಾಳ್ಮೆ ಬೇಕು, ಸರ್ಕಾರವನ್ನು, ಆಡಳಿತವನ್ನು, ದೇಶವನ್ನು ಆಳುವವರನ್ನು ಬದಲಾಯಿಸಬೇಕೆಂದು ಬಯಸುವವರು ಜನರ ಬಳಿಗೆ ಹೋಗಿ ಅದನ್ನು ಸಾಧಿಸಿಕೊಳ್ಳಬೇಕು.ನಿಮ್ಮಲ್ಲಿ ತಾಳ್ಮೆಯಿಲ್ಲದಿದ್ದರೆ ನೀವು ರೋಗಿಗಳಾಗಿಬಿಡುತ್ತೀರಿ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ ಅವರು, ನೀವು ಸದನದಲ್ಲಿ ಬಹುಮತ ಹೊಂದಿದ್ದರೂ ಕೂಡ ವಿರೋಧ ಪಕ್ಷಗಳಿಗೆ ಗೌರವ ಕೊಡಬೇಕು. ವಿರೋಧ ಪಕ್ಷಗಳು ಕೂಡ ಮಾತನಾಡಲಿ, ನಂತರ ಸರ್ಕಾರಕ್ಕೆ ಮಾತನಾಡಲು ಅವಕಾಶ ಸುಲಭವಾಗಿ ಸಿಗುತ್ತದೆ, ಏಕೆಂದರೆ ಅದಕ್ಕೆ ಬಹುಮತವಿದೆ, ಇದು ನನ್ನ ಸಲಹೆ ಎಂದರು.
ತಾವು ರೈತ ಕುಟುಂಬ ಹಿನ್ನೆಲೆಯಿಂದ ಬಂದವನಾಗಿದ್ದು ಶಾಲೆಗೆ ಹೋಗಲು ಕಿಲೋ ಮೀಟರ್ ಗಟ್ಟಲೆ ನಡೆಯಬೇಕಾಗಿತ್ತು ಎಂದು ತಮ್ಮ ಬಾಲ್ಯದ ಜೀವನವನ್ನು ಕೂಡ ನೆನಪು ಮಾಡಿಕೊಂಡರು.
ಇನ್ನು ತಮಗೆ ಜನರಿಂದ ಸಿಗುವ ಅಭಿಪ್ರಾಯ, ಸಲಹೆಗಳನ್ನು ಪ್ರಧಾನ ಮಂತ್ರಿಗಳಿಗೆ ವರ್ಗಾಯಿಸುವುದಾಗಿ ಹೇಳಿದ ವೆಂಕಯ್ಯ ನಾಯ್ಡು, ಶಿಷ್ಟಾಚಾರಗಳನ್ನು ಮುರಿಯಲು ಸಾಧ್ಯವಿಲ್ಲ. ಪ್ರಧಾನಿಯವರಿಗೆ ವಿಷಯ ತಲುಪಿಸುವುದು ತಮ್ಮ ಕೆಲಸವಷ್ಟೆ ಎಂದರು.