ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಎರಡು ಎಸ್ಡಿಆರ್‌ಎಫ್ ತಂಡಗಳನ್ನು ರಚಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಿಎಂ ಬೊಮ್ಮಾಯಿ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ಭೂಕುಸಿತ, ಬೆಳೆಹಾನಿ ಮೊದಲಾದ ವಿಷಯಗಳ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಈಗಾಗಲೇ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ತಂಡಗಳನ್ನು ನಿಯೋಜಿಸಿದ್ದು, ಜಿಲ್ಲಾಧಿಕಾರಿಗಳು ಈ ತಂಡದೊಂದಿಗೆ ನಿಕಟ ಸಂಪರ್ಕ ಹೊಂದಿ, ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿರಬೇಕು ಎಂದು ಸೂಚಿಸಿದರು.
ಗದಗ ಜಿಲ್ಲೆಯ ಬೆಣ್ಣಿಹಳ್ಳ, ಹಾವೇರಿ ಜಿಲ್ಲೆಯ ವರದಾ ನದಿ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.
ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡುವಾಗ ಆಣೆಕಟ್ಟುಗಳ ಕೆಳ ಭಾಗದ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಬೇಕು. ರಾಜ್ಯದ ಹಲವಾರು ಕೆರೆಗಳು ತುಂಬಿದ್ದು, ಅಪಾಯದ ಅಂಚಿನ ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಣ್ಣಿನ ಕುಸಿತ, ಭೂಕುಸಿತದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಜನರನ್ನು ಕಡ್ಡಾಯವಾಗಿ ಸ್ಥಳಾಂತರಿಸಬೇಕು. ರಸ್ತೆಗಳ ಮೇಲೆ ಭೂಕುಸಿತ ಉಂಟಾದಲ್ಲಿ ತೆರವುಗೊಳಿಸಲು ತಂಡಗಳನ್ನು ದಿನದ 24 ಗಂಟೆಯೂ ಸನ್ನದ್ಧವಾಗಿರಿಸುವಂತೆ ಸೂಚಿಸಿದರು.
ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಆಹಾರ ಒದಗಿಸಬೇಕು. ಕಾಳಜಿ ಕೇಂದ್ರಕ್ಕೆ ಬರದ ನಿರಾಶ್ರಿತರಿಗೆ ಡ್ರೈ ರೇಷನ್ ಕಿಟ್ ಒದಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.