ಸ್ವಾತಂತ್ರೃದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಗರ ಬಿಜೆಪಿ ಘಟಕವು ಆ.8ರಂದು ತಿರಂಗ ಬೈಕ್ ರ‌್ಯಾಲಿ ಹಾಗೂ ಆ.15ರಂದು 289 ಮತಗಟ್ಟೆಗಳ ಪೇಜ್ ಪ್ರಮುಖರ ಸಭೆ ಏರ್ಪಡಿಸಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಎನ್.ಕೆ. ಜಗದೀಶ್ ತಿಳಿಸಿದರು.
ಆ.8ರ ಬೆಳಗ್ಗೆ 8ಕ್ಕೆ ಎಂಆರ್‌ಎಸ್ ವೃತ್ತದಲ್ಲಿ ಆರಂಭವಾಗುವ ತಿರಂಗ ಯಾತ್ರೆ ಬೈಕ್ ರ‌್ಯಾಲಿ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ವಿನೋಬನಗರದ ಪೊಲೀಸ್ ಚೌಕಿಯಲ್ಲಿ ಮುಕ್ತಾಯಗೊಳ್ಳಲಿದೆ.
ಆ.15ರ ಬೆಳಗ್ಗೆ 11ಕ್ಕೆ ಗೋಪಿವೃತ್ತದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಿವಮೊಗ್ಗ ವಿಧಾನಸಭೆ ವ್ಯಾಪ್ತಿಯ ಎಲ್ಲ 289 ಬೂತ್‌ಗಳ ಪೇಜ್ ಪ್ರಮುಖರ ಸಭೆ ಏರ್ಪಡಿಸಲಾಗಿದೆ. ಸುಮಾರು ಎಂಟು ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುಮಾರು 3,500 ಬೈಕ್ ಸವಾರರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ.13 ರಿಂದ 15 ರವರೆಗೆ ಪ್ರತಿ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆಯಿಂದ ಎಲ್ಲ ಮನೆಗಳಿಗೆ ಉಚಿತವಾಗಿ ಧ್ವಜ ವಿತರಣೆ ಮಾಡಲಾಗುತ್ತದೆ. ವಾರ್ಡ್ ಹಂತದಲ್ಲಿ ಬಿಜೆಪಿ ಕಾರ್ಯಕರ್ತರು ಈ ಕಾರ್ಯದಲ್ಲಿ ಕೈ ಜೋಡಿಸಲಿದ್ದಾರೆ ಎಂದು ಎನ್.ಕೆ.ಜಗದೀಶ್ ತಿಳಿಸಿದರು.
ಶಾಸಕ ಕೆ.ಎಸ್. ಈಶ್ವರಪ್ಪ, ನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಸದಸ್ಯ ಎಸ್.ಜ್ಞಾನೇಶ್ವರ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ನಗರ ಬಿಜೆಪಿ ಘಟಕದ ಪದಾಧಿಕಾರಿಗಳಾದ ಮೋಹನ್ ರೆಡ್ಡಿ, ಸಂತೋಷ್ ಬಳ್ಳೇಕೆರೆ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.