ಅಕ್ಟೋಬರ್ ತಿಂಗಳಿನಿಂದ 5G ಸೇವೆ ಲಭ್ಯವಾಗುವ ನಿರೀಕ್ಷೆ ಇದೆ. ಆಗಸ್ಟ್ 10ರೊಳಗೆ 5G ಸ್ಪೆಕ್ಟ್ರಮ್ ಹಂಚಿಕೆ ಮಾಡಲಾಗುವುದು. ಅಕ್ಟೋಬರ್‌ನಲ್ಲಿ 5ಜಿ ಸೇವೆ ಲಭ್ಯವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
5G ಆಗಮನದ ನಂತರ ಕರೆ ಗುಣಮಟ್ಟವು ಸುಧಾರಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಸರ್ಕಾರವು 10 ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಆಫರ್ ಅನ್ನು ಹಾಕಿತ್ತು. ಆದರೆ 600 MHz ನಲ್ಲಿ ಏರ್‌ವೇವ್‌ಗಳಿಗೆ ಯಾವುದೇ ಬಿಡ್‌ಗಳನ್ನು ಸ್ವೀಕರಿಸಲಿಲ್ಲ. ಬಹುತೇಕ 5G ಬ್ಯಾಂಡ್‌ಗಳಿಗೇ ಬಂದಿದ್ದರೆ, 700 Mhz ಬ್ಯಾಂಡ್‌ಗೂ ಅಲ್ಪ ಬೇಡಿಕೆ ಬಂದಿದೆ. ಹಿಂದಿನ 2 ಹರಾಜುಗಳಲ್ಲಿ 2016 ಹಾಗೂ 2021ರಲ್ಲಿ ಇವು ಮಾರಾಟವಾಗದೇ ಉಳಿದಿವೆ. ಸರ್ಕಾರ ಸ್ಪೆಕ್ಟ್ರಂ ಹರಾಜಿನಲ್ಲಿ ದಾಖಲೆಯ 1.5 ಲಕ್ಷ ಕೋಟಿ ರೂ. ಬಿಡ್‌ಗಳನ್ನು ಸ್ವೀಕರಿಸಿದೆ.
ಮುಖೇಶ್ ಅಂಬಾನಿ ಅವರ ಜಿಯೋ 88,078 ಕೋಟಿ ರೂ. ಬಿಡ್‌ನೊಂದಿಗೆ ಮಾರಾಟವಾದ ಎಲ್ಲಾ ಏರ್‌ವೇವ್‌ಗಳಲ್ಲಿ ಅರ್ಧದಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ. ಇನ್ನು ಉದ್ಯಮಿ ಗೌತಮ್ ಅದಾನಿ ಗ್ರೂಪ್ ಹರಾಜಿನಲ್ಲಿ ಮುಖೇಶ್ ಅಂಬಾನಿ ಅವರಿಗೆ ಪೈಪೋಟಿ ನೀಡಿದೆ.
ಟೆಲಿಕಾಂ ಉದ್ಯಮಿ ಸುನಿಲ್ ಭಾರ್ತಿ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್ 43,084 ಕೋಟಿ ರೂಪಾಯಿಗಳ ಯಶಸ್ವಿ ಬಿಡ್ ಮಾಡಿದೆ. ವೊಡಾಫೋನ್ ಐಡಿಯಾ ಲಿಮಿಟೆಡ್ 18,799 ಕೋಟಿ ರೂಪಾಯಿಗೆ ಸ್ಪೆಕ್ಟ್ರಮ್ ಖರೀದಿಸಿದೆ.
ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಕಂಪನಿಗಳ ಹರಾಜು ಹಾಗೂ ಸ್ಪೆಕ್ಟ್ರಮ್ ಟಾಪ್ ಅಪ್ ದೇಶಾದ್ಯಂತ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಭರವಸೆ ನೀಡಿದ್ದಾರೆ.
ಅಕ್ಟೋಬರ್ ವೇಳೆಗೆ 5G ಸೇವೆಗಳು ಪ್ರಾರಂಭವಾಗಲಿವೆ. ಒಟ್ಟಾರೆಯಾಗಿ 1,50,173 ಕೋಟಿ ರೂಪಾಯಿ ಮೌಲ್ಯದ ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ಪ್ರಥಮ ವರ್ಷದಲ್ಲಿ ಸರ್ಕಾರವು 13,365 ಕೋಟಿ ರೂಪಾಯಿ ಪಡೆಯಲಿದೆ ಎಂದು ಅವರು ಹೇಳಿದರು.
ಅಲ್ಟ್ರಾ ಹೈ ಸ್ಪೀಡ್ ಮೊಬೈಲ್ ಇಂಟರ್ನೆಟ್ ಸಂಪರ್ಕವನ್ನು ನೀಡುವ ಸಾಮರ್ಥ್ಯವನ್ನು 5G ಸ್ಪೆಕ್ಟ್ರಮ್ ಹೊಂದಿದೆ. ಕಳೆದ ವರ್ಷ 4ಜಿ ಹರಾಜಿನಲ್ಲಿ 77,815 ಕೋಟಿ ಸಂಗ್ರಹವಾಗಿದ್ದರೆ, 2010 ರಲ್ಲಿ 3G ಹರಾಜಿನಿಂದ ಸರ್ಕಾರ 50,968.37 ಕೋಟಿ ರೂ.ಗಳಿಸಿತ್ತು. 4G ಗಿಂತ ಸುಮಾರು 10 ಪಟ್ಟು ವೇಗವನ್ನು ನೀಡುವ ಸಾಮರ್ಥ್ಯವನ್ನು 5ಜಿ ಹೊಂದಿದೆ. ಮುಂಬರುವ 2-3 ವರ್ಷಗಳಲ್ಲಿ ದೇಶದ ಬಹುತೇಕ ನಗರಗಳಲ್ಲಿ ಉತ್ತಮ 5G ಕವರೇಜ್ ಅನ್ನು ಹೊಂದುವ ನಿರೀಕ್ಷೆ ಇದೆ. ಟೆಲಿಕಾಂಗಳ ಗಮನವು ಸೇವಾ ಗುಣಮಟ್ಟ ಸುಧಾರಣೆಯತ್ತ ಇರಬೇಕು ಎಂದು ಸರ್ಕಾರ ತಿಳಿಸಿದೆ.
