ರಾಜಧಾನಿಯಲ್ಲಿ ನೆಲೆಸಿದ್ದ ಶಂಕಿತ ಉಗ್ರಗಾಮಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಸಿಸಿಬಿಯ 30 ಅಧಿಕಾರಿಗಳ ತಂಡ ತಿಲಕ್ ನಗರದ ಮನೆ ಮೇಲೆ ದಾಳಿ ಮಾಡಿದೆ.
ಫುಡ್ ಡೆಲಿವರಿ ಮಾಡುತ್ತಿದ್ದ ಹುಡುಗನ ಮನೆಯಲ್ಲಿಯೇ ತಂಗಿದ್ದ ಉಗ್ರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆರೋಪಿಯ ಹಿನ್ನೆಲೆ, ಆತ ಯಾಕೆ ಬೆಂಗಳೂರಿಗೆ ಬಂದಿದ್ದ ಎಂಬುದರ ಬಗ್ಗೆ ಸಿಸಿಬಿ ತನಿಖೆಯಲ್ಲಿ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
ಬೆಂಗಳೂರಿನ ಶ್ರೀರಾಂಪುರದಲ್ಲಿ ಕೆಲ ದಿನಗಳ ಹಿಂದೆ ಉಗ್ರಗಾಮಿ ಪತ್ತೆಯಾಗಿದ್ದ. ಕಾಶ್ಮೀರ ಮೂಲದ ಉಗ್ರಗಾಮಿ ಬೆಂಗಳೂರಿನ ಮಸೀದಿಯಲ್ಲಿ ತಂಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾಶ್ಮೀರ ಪೊಲೀಸರು ಮತ್ತು ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಈ ವೇಳೆ ಹಲವು ಸ್ಫೋಟಕ ಸಂಗತಿಗಳು ಹೊರ ಬಂದಿದ್ದವು. ಇದೀಗ ಮತ್ತೊಬ್ಬ ಉಗ್ರಗಾಮಿ ಬೆಂಗಳೂರಿನ ತಿಲಕ್ ನಗರದಲ್ಲಿ ಪತ್ತೆಯಾಗಿದ್ದು, ಬೆಂಗಳೂರು ಉಗ್ರಗಾಮಿಗಳ ಪಾಲಿಗೆ ಸ್ಲೀಪರ್ ಸೆಲ್ ಅಗಿದೆಯೇ ಎಂಬ ಅನುಮಾನ ಮೂಡಿಸಿದೆ.