ವಿಶ್ವಸಂಸ್ಥೆಯ (ಯುಎನ್) ಎನ್‌ಜಿಒ ಸಮಿತಿಯಲ್ಲಿ ವರ್ಷಗಳಿಂದ ನಿರ್ಬಂಧಿಸಿರುವ ಆರು ಮಾನವ ಹಕ್ಕುಗಳ ಗುಂಪುಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ವಿಶೇಷ ಸಮಾಲೋಚನಾ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಿ, ಅಮೆರಿಕ ಮಂಡಿಸಿದ ಕರಡು ನಿರ್ಣಯದ ವಿರುದ್ಧ ಭಾರತ ಸೇರಿದಂತೆ ಏಳು ರಾಷ್ಟ್ರಗಳು ಮತ ಚಲಾಯಿಸಿವೆ.
ಯುಎನ್ ವೆಬ್‌ಸೈಟ್ ವರದಿ ಪ್ರಕಾರ, ಅಮೆರಿಕ ಪ್ರತಿನಿಧಿ ಪ್ರಸ್ತುತ ಪಡಿಸಿದ ಕೌನ್ಸಿಲ್‌ನೊಂದಿಗೆ ಸಮಾಲೋಚನಾ ಸ್ಥಾನಮಾನ ಪಡೆಯುವ ಸರ್ಕಾರೇತರ ಸಂಸ್ಥೆಗಳ ಪಟ್ಟಿಯ ಕರಡು ನಿರ್ಣಯ ‘ಸಣ್ಣ ಕೋಲಾಹಲ’ ಉಂಟು ಮಾಡಿತು.
ಒಟ್ಟು 36 ದೇಶಗಳ ಪ್ರಾಯೋಜಕತ್ವದ ಕರಡು ನಿರ್ಣಯವು ಸಮಿತಿ ಪ್ರಸ್ತಾಪಿಸಿದ ಪಟ್ಟಿಗೆ ಆರು ಹೆಚ್ಚುವರಿ ಸರ್ಕಾರೇತರ ಸಂಸ್ಥೆಗಳನ್ನು ಶಿಫಾರಸು ಮಾಡಿದೆ.
ವಿಶ್ವಸಂಸ್ಥೆ ಪ್ರಕಾರ, ವಿಕಿಪೀಡಿಯಾ ನಡೆಸುವ ಪ್ರತಿಷ್ಠಾನ ಸೇರಿದಂತೆ ಇತರೆ ಆರು ಸರ್ಕಾರೇತರ ಸಂಸ್ಥೆಗಳನ್ನು ಅಮೆರಿಕ ಪ್ರಸ್ತಾಪಿಸಿದ ಕರಡು ಪಟ್ಟಿಗೆ ಸೇರಿಸಲಾಯಿತು. 54 ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯಲ್ಲಿ, ಸರ್ಕಾರೇತರ ಸಂಸ್ಥೆಗಳ ಸಮಿತಿಯು ವಿಶೇಷ ಸಲಹಾ ಸ್ಥಾನಮಾನಕ್ಕಾಗಿ 203 ಗುಂಪುಗಳನ್ನು ಶಿಫಾರಸು ಮಾಡಿದೆ.
ಚೀನಾ, ಭಾರತ, ಕಜಕಿಸ್ತಾನ್, ನಿಕರಾಗುವಾ, ನೈಜೀರಿಯಾ, ರಷ್ಯಾ ಮತ್ತು ಜಿಂಬಾಬ್ವೆ ವಿರುದ್ಧವಾಗಿ ಮತ ಚಲಾಯಿಸಿದರೆ, 23 ದೇಶಗಳು ಪರವಾಗಿ ಮತ ಹಾಕಿದವು. ಅಲ್ಲದೆ 18 ರಾಷ್ಟ್ರಗಳ ಸದಸ್ಯರು ಗೈರು ಹಾಜರಾಗಿದ್ದರು.