ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ನಿಮಿತ್ತ ಜಿಲ್ಲಾದ್ಯಂತ ಐತಿಹಾಸಿಕ ಸ್ಥಳಗಳಲ್ಲಿ ಆಯೋಜಿಸಿದ್ದ ಲಕ್ಷಾಂತರ ಕಂಠಗಳಲ್ಲಿ ಗೀತ ಗಾಯನ ಎಲ್ಲರ ಕಣ್ಮನ ಸೆಳೆಯಿತು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಶಿವಮೊಗ್ಗ ಡಿಸಿ ಕಚೇರಿ, ಕಿಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಶಿವಮೊಗ್ಗ, ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ 9 ಸ್ಥಳಗಳಲ್ಲಿ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಶ್ವೇತವರ್ಣದ ವಸ್ತ್ರವನ್ನು ಧರಿಸಿ, ವಿವಿಧ ತಂಡಗಳು ಗೀತ ಗಾಯನವನ್ನು ಪ್ರಸ್ತುತಪಡಿಸಿದರು.
ರಾಷ್ಟ್ರಕವಿ ಕುವೆಂಪು ರಚಿತ ಬಾರಿಸು ಕನ್ನಡ ಡಿಂಡಿಮವ, ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹಮದ್ ರಚನೆಯ ಜೋಗದ ಸಿರಿ ಬೆಳಕಿನಲ್ಲಿ, ಮತ್ತು ಹಂಸಲೇಖ ಅವರ ರಚನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.
ಶಿವಮೊಗ್ಗ ಮಹಾನಗರಪಾಲಿಕೆ ಸಹಯೋಗದಲ್ಲಿ ಶಿವಪ್ಪ ನಾಯಕ ಮಾಲ್ನಲ್ಲಿ ಸಾಮೂಹಿಕ ಗೀತಗಾಯನ ನೆರವೇರಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾರ್ಗದರ್ಶನ ಮತ್ತು ಇತರೆ ಸಹಯೋಗದೊಂದಿಗೆ ಕಾರ್ಯಕ್ರಮವು ನಾಡಗೀತೆಯೊಂದಿಗೆ ಆರಂಭವಾಗಿ, ಸರ್ಕಾರ ನಿಗದಿಪಡಿಸಿದ ಮೂರು ಕನ್ನಡ ಗೀತೆಗಳ ಗಾಯನ ನಂತರ ಸಮಾಪ್ತಿಗೊಂಡಿತು.

ವಿಶ್ವವಿಖ್ಯಾತ ಜೋಗ ಜಲಪಾತದ ಎದುರು ವಸುಧ ಶರ್ಮ ಮತ್ತು ತಂಡದವರು ಕೆ ಎಸ್ ನಿಸಾರ್ ಅಹಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಯನ್ನು ಪ್ರಸ್ತುತಪಡಿಸಿದರು. ಇಲ್ಲಿ ವಿದ್ಯಾರ್ಥಿಗಳು, ಪ್ರವಾಸಿಗರು ಸೇರಿದಂತೆ ನೂರಕ್ಕೂ ಹೆಚ್ಚು ಜನ ಪಾಲ್ಗೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನೆರವೇರಿಸಿದರು.
ಕನ್ನಡ ನಾಡು, ನುಡಿ ಗಾಯನಕ್ಕೆ ಜೋಗ ಜಲಪಾತದ ಸೌಂದರ್ಯ ಮಾರು ಹೋದಂತೆ ಭಾಸವಾಗುತ್ತಿತ್ತು.
ಕನ್ನಡ ಉಳಿಸಿ ಬೆಳೆಸುತ್ತೇನೆ ಎನ್ನುವ ಸಂಕಲ್ಪದ ಪ್ರತಿಜ್ಞಾ ವಿಧಿಯನ್ನು ಉಪವಿಭಾಗಧಿಕಾರಿ ಡಾ.ಎಲ್. ನಾಗರಾಜ್ ಬೋಧಿಸಿದರು.
ಶಿವಮೊಗ್ಗ ಲೀಡ್ ಬ್ಯಾಂಕ್ ಕೆನರಾ ಮತ್ತು ರಾಜ್ಯ ಮಟ್ಟದ ಬ್ಯಾಂಕ್ ಗಳ ಸಮಿತಿ ಆಯೋಜಿಸಿದ್ದ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್ ಗಳ ಸಾಲಮೇಳದಲ್ಲೂ ಕನ್ನಡ ಡಿಂಡಿಮ ಬಾರಿಸಿತು.