Friday, October 4, 2024
Friday, October 4, 2024

ಮಾದಕದ್ರವ್ಯ ಸೇವನೆ ದುಷ್ಪರಿಣಾಮಗಳಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು

Date:

ಮಾದಕ ದ್ರವ್ಯ ಸೇವನೆಯಿಂದ ಎದುರಾಗುವ ಸಮಸ್ಯೆಗಳು ಮತ್ತು ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿ ಹಂತದಲ್ಲೇ ಅರಿವು ಮೂಡಿಸುವುದರಿಂದ ಇದರ ತಡೆ ಸಾಧ್ಯವಾಗುವುದು ಎಂದು 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾನು.ಕೆ.ಎಸ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಅಬಕಾರಿ ಇಲಾಖೆ, ಸರ್ಕಾರಿ ಪದವಿಪೂರ್ವ ಕಾಲೇಜು, ಸೈನ್ಸ್ ಮೈದಾನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಣಿಕೆಯಿಂದ ಇಡೀ ಸಮಾಜದ ಮೇಲಾಗುವ ಹಾನಿ, ದುಷ್ಪರಿಣಾಮ ಕುರಿತು ಅರಿವು ಮೂಡಿಸಿ, ತಡೆಯುವ ಉದ್ದೇಶದಿಂದ 1989 ರಿಂದ ಪ್ರತಿ ವರ್ಷ ಜೂನ್ 26 ರಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನಾಚರಣೆಯ ಉದ್ದೇಶ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳು, ಯುವಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ಹದಿವಯಸ್ಸಿನಲ್ಲಿ ಏನೋ ಶೋಕಿ, ನಟರ ಸ್ಟೈಲ್ ಅನುಕರಣೆ ಅಥವಾ ಆನಂದ ಪಡೆಯಲೆಂದು ಶುರುವಾದ ಮಾದಕ ವ್ಯಸನ ದುಶ್ಚಟವಾಗಿ ಪರಿವರ್ತನೆಯಾಗಿ ಇಡೀ ಜೀವನವ ದಿಕ್ಕು ದೆಸೆಯನ್ನು ದುರಂತಮಯವಾಗಿಸುತ್ತದೆ. ಆದ್ದರಿಂದ ಮಕ್ಕಳ ಹಂತದಲ್ಲೇ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ ಮಾತನಾಡಿ, ನಟರು, ಶ್ರೀಮಂತರ ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿರುವುದು ಕಂಡು ಬರುತ್ತಿದೆ. ಇದರ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಂಡು ಎಚ್ಚರಿಕೆಯಿಂದ ಬದುಕುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ. ಗಾಂಜಾ ಸೇರಿದಂತೆ ಯಾವುದೇ ರೀತಿಯ ಮಾದಕ ಸೇವನೆಯ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ಜಾಮೀನು ಸಿಗುವುದಿಲ್ಲ. ಜೈಲೇ ಗತಿಯಾಗುವುದು. ಈ ವಿಷಯದಲ್ಲಿ ಕಾಯ್ದೆ ಕಠಿಣವಾಗಿದೆ. ನಿಮ್ಮ ನಂಬಿದ ಇಡೀ ಕುಟುಂಬ ನೋವು ಅನುಭವಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಈ ದುಶ್ಚಟಗಳಿಂದ ದೂರವಿದ್ದು, ತಮ್ಮ ಸುತ್ತಮುತ್ತಲಿನಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕೆಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚಿನ ಚೈತನ್ಯ, ಉತ್ಸಾಹ, ಹುಮ್ಮಸ್ಸು ಇರುತ್ತದೆ. ಹದಿವಯಸ್ಸಿನಲ್ಲಿ ಮನಸ್ಸು ವಿವಿಧ ರೀತಿಯ ಆಕರ್ಷಣೆಗೆ ಒಳಗಾಗುವುದು ಸಹಜವಾದರೂ, ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ವರದಿಗಳನ್ನು ನೋಡಿದರೆ ವಿದ್ಯಾರ್ಥಿ ಹಂತದಲ್ಲೇ ದುಶ್ಚಟಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಿದೆ. ಈ ವಯಸ್ಸಿನಲ್ಲಿ ದುಶ್ಚಟಗಳಿಗೆ ದಾಸರಾದರೆ ಇಡೀ ಜೀವನ ಹಾಳಾಗುತ್ತದೆ. ಸಣ್ಣ ಆಸೆಗಾಗಿ ಉನ್ನತವಾದ ಜೀವನವನ್ನು ಬಲಿಕೊಡುವುದು ಬೇಡವೆಂದು ಕಿವಿಮಾತು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯ ಕುರಿತು ಮನೆಯಿಂದಲೇ ಅರಿವು ಆರಂಭವಾಗಬೇಕು. ಜಿಲ್ಲೆಯಲ್ಲಿ 2022 ರಲ್ಲಿ ಗಾಂಜಾ ಸೇವನೆಯ 49 ಪ್ರಕರಣ ಮತ್ತು ಇತರೆ ಎನ್‍ಡಿಪಿಎಸ್ ಪ್ರಕರಣದಡಿ 11 ಪ್ರಕರಣದ ದಾಖಲಿಸಿ 12 ಕೆಜಿ 753 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹಾಗೂ 54 ಪಾನಮತ್ತ ವಾಹನ ಚಾಲನೆ ಪ್ರಕರಣದಲ್ಲಿ ದಾಖಲಾಗಿದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾದಕ ದ್ರವ್ಯ ತಡೆ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಮಾದಕ ದ್ರವ್ಯ ಸೇವನೆ ಬಗ್ಗೆ ಮೊದಲು ಯಾವುದೇ ಪುರಾವೆಗಳು ಇರುತ್ತಿರಲಿಲ್ಲ. ಆದರೆ ಈಗ ಟೆಸ್ಟ್ ಕಿಟ್ ಬಂದಿದೆ. ಮಾದಕ ದ್ರವ್ಯ ಸೇವನೆ ಮಾಡಿದ್ದರೆ ಇದರಿಂದ ಸುಲಭವಾಗಿ ತಿಳಿಯಬಹುದು. ಆದ್ದರಿಂದ ವಿದ್ಯಾರ್ಥಿಗಳು, ಯುವಜನತೆ ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಭಯ ಮತ್ತು ಜಾಗೃತಿ ಎರಡೂ ಇರಬೇಕು ಎಂದರು.

ಜಿಲ್ಲಾ ಅಬಕಾರಿ ಅಧಿಕಾರಿ ಕ್ಯಾಪ್ಟನ್ ಅಜೀತ್ ಕುಮಾರ್ ಪಿಪಿಟಿ ಪ್ರದರ್ಶನ ಮೂಲಕ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ(ಎನ್‍ಡಿಪಿಎಸ್) ಕುರಿತು ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು.

ಮನೋವೈದ್ಯರಾದ ಡಾ.ಸಂತೋಷ್.ಎಂ.ಎನ್ ಮಾದಕ ವಸ್ತುಗಳ ಸೇವನೆಯಿಂದಾಗು ಸಮಸ್ಯೆಗಳು, ಮಾದಕ ವಸ್ತು ವ್ಯಸನಕ್ಕೆ ಚಿಕಿತ್ಸೆ, ವ್ಯಸನ ತಡೆಗಟ್ಟಲು ಅನುಸರಿಸಬೇಕಾದ ಜೀವನ ಶೈಲಿ ಕುರಿತು ಉಪನ್ಯಾಸ ನೀಡಿದರು.

ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಸಿಮ್ಸ್ ಮನೋವೈದ್ಯಕೀಯ ವಿಭಾಗದ ಡಾ.ಶ್ರೀಧರ್, ಜಿಲ್ಲಾ ಕುಷ್ಟ ರೋಗ ನಿವಾರಣೆ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಶಮಾ ಬೇಗಂ ಫಕೃದ್ದೀನ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ವೈ.ಚಂದ್ರಶೇಖರ್, ಆರೋಗ್ಯ ಇಲಾಖೆಯ ದೊಡ್ಡವೀರಪ್ಪ, ಪ್ರತಿಮಾ ಇತರೆ ಸಿಬ್ಬಂದಿ ಪಾಲ್ಗೊಂಡಿದ್ದರು. ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...